ಮಂಗಳೂರು: “ನೈರುತ್ಯ ಶಿಕ್ಷಕರ ಕ್ಷೇತ್ರಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅನೇಕ ಶಿಕ್ಷಕರು ಮತ ಹಾಕಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ನವೀಕರಣದ ಹೆಸರಲ್ಲಿ ಶಿಕ್ಷಕರ ಗಮನಕ್ಕೆ ಬಾರದೆ ಮತದಾನದ ಹಕ್ಕಿಗೆ ಕತ್ತರಿ ಹಾಕಲಾಗಿದೆ. ಇದನ್ನು ಚುನಾವಣೆ ಆಯೋಗದ ತಪ್ಪು ಎಂದು ಹೇಳಲಾಗುವುದಿಲ್ಲ. ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರ ಇರುವುದು ಸ್ಪಷ್ಟ. ಅನೇಕ ಮಂದಿ ಶಿಕ್ಷಕರು ಈ ಬಗ್ಗೆ ನಮ್ಮಲ್ಲಿ ದೂರು ನೀಡಿದ್ದಾರೆ. ಅನೇಕ ಮಂದಿ ಹೊಸದಾಗಿ ಆರ್ಜಿ ಹಾಕಿದ್ದರೂ ಚುನಾವಣಾ ಆಯೋಗ ಅದನ್ನು ಗಮನಿಸಿಲ್ಲ” ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವ ಭಾಸ್ಕರ್ ಶೆಟ್ಟಿ ಟಿ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಹೆಸರು ಮಾತ್ರ ಶಿಕ್ಷಕರ ಕ್ಷೇತ್ರ ಎಂದಾಗಿದ್ದು ಈ ಕ್ಷೇತ್ರವನ್ನು ಆಳುವವರು ಮಾತ್ರ ಬೇರೆಯೇ ಆಗಿದ್ದಾರೆ. ಈ ಕಾರಣಕ್ಕಾಗಿ ಓರ್ವ ಶಿಕ್ಷಕನಾಗಿ ಈ ಕ್ಷೇತ್ರದ ಆಳ ಅರಿವು ಬಲ್ಲ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಚುನಾವಣೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಈಗಾಗಲೇ ಕರ್ನಾಟಕ ಚುನಾವಣೆ ಆಯೋಗದ ಮುಖ್ಯಸ್ಥರಿಗೆ ದೂರು ನೀಡಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಾವು ಹೈಕೋರ್ಟ್ ಮೊರೆ ಹೋಗಿದ್ದೇವೆ. ನೈರುತ್ಯ ಕ್ಷೇತ್ರದ ಚುನಾವಣೆ ಪ್ರಕ್ರಿಯೆಯನ್ನು ನಿಲ್ಲಿಸಿ ಮತದಾನದಿಂದ ವಂಚಿತರಾಗಿರುವ ಶಿಕ್ಷಕರಿಗೆ ತಕ್ಷಣವೇ ಅವಕಾಶ ನೀಡಬೇಕು. ನಂತರ ಚುನಾವಣೆ ಪ್ರಕ್ರಿಯೆಯನ್ನು ಶುರು ಮಾಡಬೇಕು. ಯಾವುದೇ ಶಿಕ್ಷಕರು ತಮ್ಮ ಸಮಸ್ಯೆ ಹೇಳಿಕೊಳ್ಳಬೇಕಿದ್ದಲ್ಲಿ 7022862057 ನಂಬರಿಗೆ ಕರೆ ಮಾಡಿ” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ವಸಂತರಾಜ್ ಶೆಟ್ಟಿ, ವಕೀಲ ಮಂಜುನಾಥ್, ಪ್ರೊ. ಸುಬ್ಬಣ್ಣ ಶೆಟ್ಟಿ, ಉದ್ಯಮಿ ರತ್ನಾಕರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ರಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.