ಮಂಗಳೂರು: 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳವು ವೃತ್ತಿ ಆಕಾಂಕ್ಷಿಗಳಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ನೀಡುತ್ತಾ ಬಂದಿದೆ. ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಮಹತ್ಕಾರ್ಯವನ್ನು ಸಾಂಗವಾಗಿ ನಡೆಸುತ್ತಿದೆ.
ಎರಡು ದಶಕಗಳಿಂದ ಪ್ರಗತಿ ಮೇಳವು ತನ್ನ ನಿಖರವಾದ ಯೋಜನೆ, ಉತ್ತಮ ಆತಿಥ್ಯ ಮತ್ತು ಉನ್ನತ ಮಟ್ಟದ ವೃತ್ತಿ ಅವಕಾಶಗಳೊಂದಿಗೆ ಪ್ರತಿಷ್ಠಿತ ಉದ್ಯೋಗ ಮೇಳವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಳೆದ 13 ಆಳ್ವಾಸ್ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31, 896 ಉದ್ಯೋಗಾವಕಾಶವನ್ನು ನೀಡಿದ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‍ಆರ್ ಚಟುವಟಿಕೆಯ ಅಡಿಯಲ್ಲಿ ಉದ್ಯೋಗ ಮೇಳದ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. ಈ ಮೇಳವು, ಭಾಗವಹಿಸುವವರಿಗೆ ಮತ್ತು ನೇಮಕಾತಿ ನಡೆಸುವ ಕಂಪನಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ.
ಈ ವರ್ಷ, ನೇಮಕಾತಿ ಕಂಪನಿಗಳ ಪ್ರತಿಕ್ರಿಯೆ ಅಭೂತಪೂರ್ವವಾಗಿದ್ದು, ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಲ್ಪಟ್ಟಿವೆ ಮತ್ತು ಉದ್ಯೋಗ ಮೇಳದ ಸಂಘಟನಾ ಸಮಿತಿಯು 254 ಪ್ರಮುಖ ನೇಮಕಾತಿದಾರರ ಭಾಗವಹಿಸುವಿಕೆಯನ್ನು ಅಂತಿಮಗೊಳಿಸಿದೆ.
ಕರಾವಳಿ ಐಟಿ ವಲಯವಾಗಿ ದಾಪುಗಾಲು
ಮಂಗಳೂರು ಮತ್ತು ಉಡುಪಿಯು ಕರ್ನಾಟಕದ ಭವಿಷ್ಯದ ತಂತ್ರಜ್ಞಾನದ ಕೇಂದ್ರವಾಗಲು ಸಜ್ಜಾಗುತ್ತಿವೆ. ಈ ಜಿಲ್ಲೆಗಳು ಕರಾವಳಿ ಸೌಂದರ್ಯ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಒಳಗೊಂಡಿವೆ. ಈ ಪ್ರಯತ್ನಕ್ಕೆ ಸಾಕಷ್ಟು ಬೆಂಬಲ ನೀಡುತ್ತಿರುವ ಆಳ್ವಾಸ್ ಪ್ರಗತಿ, ಈ ಉದ್ಯಮಗಳಿಗೆ ಪ್ರತಿಭಾವಂತ ಯುವಸಮುದಯದ ಬೃಹತ್ ಸಮೂಹವನ್ನು ಪೂರೈಸುವಲ್ಲಿ ಗಣನೀಯ ಪಾತ್ರವಹಿಸುತ್ತಿದೆ. ಈ ಪ್ರಯತ್ನವನ್ನು ಗುರುತಿಸಿ, ಪ್ರತಿμÁ್ಠನವು ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯಲ್ಲಿ ಉದ್ಯಮ ಸ್ಥಾಪಿಸಿರುವ ಆರು ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರನ್ನು ಗೌರವಿಸಲಿದೆ.
ಉದ್ಘಾಟನಾ ಸಮಾರಂಭ
ಆಳ್ವಾಸ್ ಪ್ರಗತಿ 2024 ರ 14 ನೇ ಆವೃತ್ತಿಯ ಉದ್ಘಾಟನೆಯು ಜೂನ್ 7 ರಂದು ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯಲಿದ್ದು, ಎಂಆರ್‍ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರುವರು.