ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ ವ್ಯಕ್ತಿಯೋರ್ವರಿಗೆ 48.36 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿಯೋರ್ವರು ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ನೋಡಿ ಅದರಲ್ಲಿ ಕೇಳಿದ ಮಾಹಿತಿಯನ್ನು ಜಾಹೀರಾತುದಾರರೊಂದಿಗೆ ಹಂಚಿಕೊಂಡಿದ್ದರು. ಅನಂತರ ಅವರನ್ನು ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ಸೇರ್ಪಡೆಗೊಳಿಸಲಾಯಿತು. ಅದರಲ್ಲಿ ಹೂಡಿಕೆಯ ಬಗ್ಗೆ ಗ್ರೂಪ್ ಅಡ್ಮಿನ್‌ಗಳು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಬಳಿಕ ಲಿಂಕ್ ಕಳುಹಿಸಿದ್ದರು. ಇದನ್ನು ನಂಬಿದ ದೂರುದಾರರು ಖಾತೆ ತೆರೆದಿದ್ದರು. ಆ ಬಳಿಕ ಷೇರುಗಳ ಖರೀದಿಗಾಗಿ ಮೇ 11ರಿಂದ ಮೇ 29ರ ಅವಧಿಯಲ್ಲಿ ಒಟ್ಟು 48.36 ಲ.ರೂ.ಗಳನ್ನು ವರ್ಗಾಯಿಸಿದ್ದರು. ಅವರು ಇನ್‌ಸ್ಟಾಲ್ ಮಾಡಿಕೊಂಡ ಆ್ಯಪ್‌ನಲ್ಲಿ ನೋಡಿದಾಗ ಅವರ ಖಾತೆಯಲ್ಲಿ 2.01 ಕೋ.ರೂ. ಜಮೆಯಾಗಿರುವುದು ತೋರಿಸುತ್ತಿತ್ತು. ಆದರೆ ಅದನ್ನು ಪಡೆಯಲು ಪ್ರಯತ್ನಿಸಿದಾಗ ಅವರು ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.