ಮಂಗಳೂರು: ಷೇರು ಹೂಡಿಕೆ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 19.50 ಲಕ್ಷ ರೂ. ವಂಚಿಸಿದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಕಾಶ್ ವರ್ನಭಾನಿ ಎಂಬಾತ ಕಳುಹಿಸಿದ ಲಿಂಕ್ ಮೂಲಕ ತಾನು ಎ.7ರಂದು ವಾಟ್ಸ್ಆ್ಯಪ್ ಗ್ರೂಪ್ ಗೆ ಸೇರ್ಪಡೆಗೊಂಡಿದ್ದೆ. ಬಳಿಕ ಆ ಗ್ರೂಪ್ ನಲ್ಲಿ ಸಿಂಗ್ ಎಂಬಾತ ಹಣವನ್ನು ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ವಿಚಾರ ತಿಳಿಸಿದ. ಅದರಂತೆ ತಾನು ಎ.29ರಂದು 1 ಲಕ್ಷ ರೂ.ವರ್ಗಾವಣೆ ಮಾಡಿದ್ದೆ. ಮೇ 3ರಂದು 3 ಲಕ್ಷ ರೂ., ಮೇ 10ರಂದು 1.50 ಲಕ್ಷರೂ., ಮೇ 17ರಂದು 4 ಲಕ್ಷ ರೂ. ಹೀಗೆ ಹಂತ ಹಂತವಾಗಿ 19.50 ಲಕ್ಷ ರೂ. ವರ್ಗಾಯಿಸಿದ್ದೆ. ನಂತರ ಹೂಡಿಕೆ ಮೊತ್ತವನ್ನು ವಾಪಸ್ ನೀಡುವಂತೆ ಕೇಳಿದಾಗ ಆರೋಪಿ ಅನೂಜ್ ಗುಪ್ತಾ ಎಂಬಾತ ಹೆಚ್ಚುವರಿಯಾಗಿ 7.88 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ. ಆಗ ತಾನು ಮೋಸ ಹೋಗಿರುವುದು ಗೊತ್ತಾಯಿತು ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.