ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಜನತಾದಳ (ಜೆಡಿಎಸ್) ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಭಾನುವಾರದಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸೂರಜ್ ರೇವಣ್ಣ ಪರ ಸೋಮವಾರ (ಜೂನ್. 24) ಜಾಮೀನು ಅರ್ಜಿ ಸಲ್ಲಿಸಲಾಗುತ್ತದೆ.
ಮುಂದಿನ ವಿಚಾರಣೆ ಜುಲೈ 6 ರಂದು ನಡೆಯಲಿದೆ.
ಈ ಬಗ್ಗೆ ಸೂರಜ್ ರೇವಣ್ಣ ಪರ ವಕೀಲ ನಿಖಿಲ್ ಕಾಮತ್ ಮಾಹಿತಿ ನೀಡಿದ್ದಾರೆ. ಅಪರಾಧ ತನಿಖಾ ಇಲಾಖೆ (ಸಿಐಡಿ) ಕಸ್ಟಡಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸಿಐಡಿ ಮುಂದಿನ ನಡೆ ನೋಡಿಕೊಂಡು ಜಾಮೀನು ಅರ್ಜಿ ಸಲ್ಲಿಸುವುದಾಗಿ ನಿಖಿಲ್ ಕಾಮತ್ ಮಾಹಿತಿ ನೀಡಿದ್ದಾರೆ.
ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಸೆನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿತ್ತು. ಸೂರಜ್ ರೇವಣ್ಣ ಅವರನ್ನು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಶಿವಕುಮಾರ್ ಅವರ ಮುಂದೆ ಹಾಜರುಪಡಿಸಿದ್ದರು. ವಾದ ಆಲಿಸಿದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಏನಿದು ಸೂರಜ್ ರೇವಣ್ಣ ಪ್ರಕರಣ?
ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಎಚ್‌ಡಿ ರೇವಣ್ಣ ಅವರ 37 ವರ್ಷದ ಪುತ್ರ ಸೂರಜ್ ರೇವಣ್ಣ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿತ್ತು. ‘ಅಸ್ವಾಭಾವಿಕ ಅಪರಾಧಗಳು’ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
27 ವರ್ಷದ ಚೇತನ್ ಕೆಎಸ್ ಎಂಬುವವರು ದೂರು ನೀಡಿದ್ದಾರೆ. ಸೂರಜ್ ರೇವಣ್ಣ ಅವರು ಜೂನ್ 16 ರಂದು ಹೊಳೆನರಸೀಪುರ ತಾಲೂಕಿನ ಘನ್ನಿಕಡದಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನಗೆ ಬೆದರಿಕೆ ಹಾಕಿದ್ದಾರೆ. ಅವರು ಕರೆದಾಗಲೆಲ್ಲ ತಮ್ಮ ಫಾರ್ಮ್‌ಹೌಸ್‌ಗೆ ಬರುವಂತೆ ಹೇಳಿದ್ದಾರೆ ಎಂದು ಚೇತನ್ ಆರೋಪಿಸಿದ್ದಾರೆ.
ಸೂರಜ್ ರೇವಣ್ಣನ ಆಪ್ತರೊಬ್ಬರು ಈ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದರು, ಕೆಲಸ ಮತ್ತು ಬಾಯಿ ಮುಚ್ಚಿಕೊಂಡಿರಲು 2 ಕೋಟಿ ರುಪಾಯಿ ನೀಡುವುದಾಗಿಯೂ ಹೇಳಿದ್ದಾರೆ ದೂರು ನೀಡಿದ್ದಾರೆ. ಆದರೆ, ದೂರುದಾರ ಚೇತನ್ ಕೆಎಸ್ ವಿರುದ್ಧ ಸುಲಿಗೆ ಯತ್ನದ ಆರೋಪದಲ್ಲಿ ಪ್ರತಿದೂರು ದಾಖಲಾಗಿದೆ.
ಸೂರಜ್ ರೇವಣ್ಣ ಅವರಿಂದ 5 ಕೋಟಿ ರುಪಾಯಿ ಸುಲಿಗೆ ಮಾಡುವ ಉದ್ದೇಶದಿಂದ ‘ಸುಳ್ಳು ದೂರು’ ದಾಖಲಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಆರೋಪಿಸಿದ್ದಾರೆ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಜೆಡಿಎಸ್ ಕಾರ್ಯಕರ್ತನ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ. ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಜೆಡಿಎಸ್ ಎಂಎಲ್‌ಸಿಯಿಂದ ಹಣ ವಸೂಲಿ ಮಾಡಲು ಪಕ್ಷದ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು, ಮಗನ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಚ್.ಡಿ.ರೇವಣ್ಣ, ನಾನು ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ, ನನಗೆ ದೇವರು ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇದೆ, ಅಂತಹ ಷಡ್ಯಂತ್ರಗಳಿಗೆ ನಾನು ಹೆದರುವುದಿಲ್ಲ, ಅದು ಏನೆಂದು ನನಗೆ ತಿಳಿದಿದೆ, ಸಮಯ ನಿರ್ಧರಿಸುತ್ತದೆ ಎಂದಿದ್ದಾರೆ.