ಉಡುಪಿ ಜಿಲ್ಲೆಯಲ್ಲಿ ಅತಂಕ ಸೃಷ್ಟಿಸಿದ್ದ ಗ್ಯಾಂಗ್ ವಾರ್ ಅರೋಪಿಗಳು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಸಂಭವಿಸಿದೆ.
ಕಾರಾಗೃಹದಲ್ಲಿರುವ ಈ ಖತರ್ ನಾಕ್ ಗ್ಯಾಂಗ್ ಕುರ್ಚಿ ಅಡುಗೆ ಮನೆಯಲ್ಲಿದ್ದ ಚಾಹಾ ಸೌಟು ಪಾತ್ರೆಗಳಿಂದ ಜಿಲ್ಲಾ ಅಧೀಕ್ಷಕರು, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೇನ್ ಪಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲರ್ ಎಸ್.ಎ.ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ.
ಮಾತ್ರವಲ್ಲದೇ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ ಮತ್ತೆ ಗಲಾಟೆ ಆರಂಭಿಸಿ ಸಿಬ್ಬಂದಿಯನ್ನು ದೂಡಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿದರೆನ್ನಲಾಗಿದೆ.
ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಟನ್ನು ಮತ್ತು ಚಹಾ ಮಾಡುವ ಸೌಟನ್ನು ತಂದು, ಮುಹಮ್ಮದ್ ಸಕ್ಲೇನ್ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತ್ನಿಸಿದ್ದನೆಂದು ದೂರಲಾಗಿದೆ.
ಅಲ್ಲದೆ ಕರ್ತವ್ಯದಲ್ಲಿದ್ದ ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ಧರಾಮ ಬಿ.ಪಾಟೀಲ್ ಹಾಗೂ ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ. ಅದರಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರನ್ನು ಇಲ್ಲಿಂದ ಬೇರೆ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡುವಂತೆ ಜೈಲು ಅಧೀಕ್ಷಕರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದರಂತೆ ನ್ಯಾಯಾಲಯ ಅನುಮತಿ ನೀಡಿದೆ. ಮುಂದೆ ಇಲಾಖೆ ಸೂಚಿಸುವ ಸೆಂಟ್ರಲ್ ಜೈಲಿಗೆ ಇವರನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಅಲ್ಲಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕೂಡ ಆರೋಪವಿದೆ.ಜೈಲ್ ನಲ್ಲಿ ಕೈದಿಗಳಿಗೆ ಕೆಲವು ಸರಿಯಾಗಿ ವ್ಯವಸ್ಥೆಗಳಿಲ್ಲ.ಅಲ್ಲಿಯ ಕೈದಿಗಳಿಗೆ ಸರಿಯಾಗಿ ಊಟ, ತಿಂಡಿ ಸಮಯದಲ್ಲಿ ನೀಡಿಲ್ಲ.ಆರೋಪಿಗಳನ್ನು ಮನೆಯವರು ನೋಡಬೇಕಾದರೆ ಅಲ್ಲಿಯ ಅಧಿಕಾರಿಗಳಿಗೆ ಹಣ ನೀಡಬೇಕು, ಹೊರಗಿನ ಯಾವುದೇ ವಸ್ತುಗಳು ಒಳಗೆ ಹೋಗಬೇಕಾದರೆ ಲಂಚ ನೀಡಬೇಕೆ ಎಂಬ ಆರೋಪ ಕೇಳಿಬಂದಿದೆ.