ಬಂಟ್ವಾಳ: ಹೊಳೆ ಬದಿಯಲ್ಲಿ ಚಿರತೆ ಯನ್ನು ಹೋಲುವ ಪ್ರಾಣಿ ಯೊಂದು ಮೊಸಳೆಯನ್ನು ಹಿಡಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ಬಂಟ್ವಾಳದ್ದು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.
ವೀಡಿಯೋದಲ್ಲಿ ಮೊಸಳೆಯನ್ನು ಹಿಡಿಯುವ ಪ್ರಾಣಿಯನ್ನು ಸೂಕ್ಷ್ಮ ವಾಗಿ ಗಮನಿಸುವಾಗ ಅದರ ಚರ್ಮವು ಚಿರತೆಗಿಂತ ಸಂಪೂರ್ಣ ಭಿನ್ನವಾಗಿದ್ದು, ಅದು ದಕ್ಷಿಣ ಅಮೆರಿಕ ದಲ್ಲಿ ಕಂಡುಬರುವ ಜಾಗ್ವಾರ್ ಪ್ರಾಣಿಯನ್ನು ಹೋಲುತ್ತಿದೆ.
ಅವು ನದಿ ಬದಿಯಲ್ಲಿ ಮೊಸಳೆಗಳನ್ನೇ ಗುರಿ ಮಾಡಿ ಬೇಟೆಯಾಡುತ್ತವೆ. ಹೀಗಾಗಿ ವೀಡಿಯೋದಲ್ಲಿ ಕಂಡುಬಂದಿರುವ ದೃಶ್ಯ ಭಾರತದ್ದೇ ಅಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿದೆ.
ಕೆಲವು ದಿನಗಳಿಂದ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬಂಟ್ವಾಳದ ನದಿಯಲ್ಲಿ ಕಂಡುಬಂದಿರುವ ದೃಶ್ಯ. ಆದ್ದರಿಂದ ನದಿ ದಡಕ್ಕೆ ಮೀನು ಹಿಡಿಯಲು ಹೋಗುವವರು ಜಾಗರೂಕರಾಗಿರಬೇಕು ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಈ ಸ್ಪಷ್ಟನೆ ನೀಡಿದ್ದಾರೆ.