ಮಂಗಳೂರು: ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಒಂದಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಆಕ್ಟಿವಾದಲ್ಲಿ ಆಗಮಿಸಿದ ಆರೋಪಿಗಳು ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸ್ಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ಗೆ ನುಗ್ಗಿದ್ದಾರೆ. ಆರೋಪಿಗಳು ಚಿಕ್ಕ ಆಸಿಡ್ ತುಂಬಿದಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್‌ಗೆ ಬಲಾತ್ಕಾರವಾಗಿ ಕೈ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ನ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ದೂಡಿ ಹಾಕಿದ್ದು, ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿದ ಸಂದರ್ಭ ಆರೋಪಿಗಳು ಪರಾರಿಯಾಗಿರುತ್ತಾರೆ.ಮೂವರು ಆರೋಪಿಗಳ ಪೈಕಿ ಒಬ್ಬ ಹೆಲೈಟ್ ಧಾರಿ ಸ್ಕೂಟರನ್ನು ಸ್ಟಾರ್ಟಿಂಗ್‌ನಲ್ಲಿಯೇ ನಿಲ್ಲಿಸಿ ಕಾಯುತ್ತಿದ್ದು, ಇನ್ನಿಬ್ಬರ ಪೈಕಿ ಒಬ್ಬ ಬುರ್ಖಾಧಾರಿಯಾಗಿದ್ದು ಸವಾರನ ಹಿಂಬದಿಯಲ್ಲಿ ಕುಳಿತಿದ್ದ ಚಲನವಲನಗಳನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿರುತ್ತಾರೆ. ಈತ ಬುರ್ಖಾ ಧರಿಸಿದ್ದರೂ ಗಂಡಸ್ಸೇ ಕುಳಿತಿದ್ದುದು ಹಲವರ ಗಮನಕ್ಕೆ ಬಂದಿದೆ.ಫೈನಾನ್ಸ್ಗೆ ನುಗ್ಗಿದ ಇಬ್ಬರಲ್ಲಿ ಒಬ್ಬ ಹೆಲೈಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ. ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್‌ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಆರೋಪಿಗಳು ತಂದಿಟ್ಟ ಆಸಿಡ್ ಕ್ಲೋರೋಫಾರ್ಮ್ ಎನ್ನಲಾಗಿದ್ದು ಹೆಚ್ಚುವರಿ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವ್ಯವಸ್ಥಿತ ಸಂಚು ನಡೆಸಿ ದರೋಡೆಯ ಪ್ರಯತ್ನ ನಡೆಸಿರುವುದರ ಹಿಂದೆ ಜಾಲವೊಂದರ ಕೈವಾಡ ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.