ಬಂಟ್ವಾಳ: ಕೊಡಗು ಮೂಲದ ವ್ಯಕ್ತಿಯೊಬ್ಬರು ಬಿ.ಸಿ. ರೋಡಿನಿಂದ ನರಿಕೊಂಬುವಿಗೆ ಹೋಗಲು ವಾಹನಕ್ಕೆ ಕಾಯುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಡ್ರಾಪ್ ಕೊಡುವ ನೆಪದಲ್ಲಿ ಹಲ್ಲೆ ನಡೆಸಿ ನಗದು ಹಾಗೂ ಚಿನ್ನದ ಸರ ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊಡಗಿನ ವೀರಾಜಪೇಟೆ ನಿವಾಸಿ ಎಂ. ಗಂಗಾಧರ ಅವರು ದರೋಡೆಗೊಳಗಾದವರು. ಅವರು ಆ. 9ರಂದು ವಿರಾಜಪೇಟೆಯಿಂದ ಬಿ.ಸಿ. ರೋಡಿಗೆ ಬಂದು ನರಿಕೊಂಬುನಲ್ಲಿರುವ ಅಣ್ಣನ ಮನೆಗೆ ತೆರಳುವುದಕ್ಕೆ ರಾತ್ರಿ ಯಾವುದಾದರೂ ವಾಹನ ಸಿಗುತ್ತದೆಯೋ ಎಂದು ಕಾಯುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ಅವರ ಬಳಿ ಬಂದು ನಿಂತಿದ್ದು, ಅದರಲ್ಲಿದ್ದ ಅಪರಿಚಿತರು ತಾವು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು ಅಲ್ಲಿವರೆಗೆ ಬರುವಂತೆ ತಿಳಿಸಿದ್ದಾರೆ. ಹಾಗಾಗಿ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದಾರೆ. ಕಾರು ಸ್ವಲ್ಪ ಮುಂದೆ ಚಲಿಸಿದಾಗ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಗಂಗಾಧರ್ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ 80,000 ರೂ. ಮೌಲ್ಯದ ಚಿನ್ನದ ಸರ ಹಾಗೂ 2 ಸಾವಿರ ರೂ. ನಗದು ಕಸಿದುಕೊಂಡು ಬಳಿಕ ಅವರನ್ನು ಕಾರಿನಿಂದ ದೂಡಿ ಹಾಕಿ ಪರಾರಿಯಾಗಿದ್ದಾರೆ.
ಬಳಿಕ ಗಂಗಾಧರ್ ಈ ಕುರಿತು ತನ್ನ ಮನೆಯವರು ಹಾಗೂ ಅಣ್ಣನಿಗೆ ವಿಷಯ ತಿಳಿಸಿದ್ದು, ಗಾಯಗೊಂಡಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಆ. 9ರಂದು ನಡೆದರೂ ಅವರು ಆ. 14ರಂದು ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.