ಮಂಗಳೂರು :ಕೇರಳ ರಾಜ್ಯದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ತಂಡವೊಂದನ್ನು ವಶಕ್ಕೆ ಪಡೆದುಕೊಂಡು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡು ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಮಂಗಳೂರು ನಗರದ ಕ್ಲಾಕ್ ಟವರ್ ಪರಿಸರದ ಲಾಡ್ಜ್ ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂಪಾಯಿ ಮುಖಬೆಲೆಯ ಖೋಟಾ ನೋಟು ಚಲಾವಣೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ವಿ. ಪ್ರಿಯೇಶ್(38) ಕೇರಳ ರಾಜ್ಯ, ಕಾಸರಗೋಡು ಜಿಲ್ಲೆ, ಕೊಳತ್ತೂರು ಅಂಚೆ,ಕರಿಚೇರಿ ಪೆರ್ಲಂ ವೀಡು, ವಿನೋದ್ ಕುಮಾರ್.ಕೆ(33),ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ ಮಲ್ಲಂ ಪೋಸ್ಟ್, ಮುಳಿಯಾರು ಗ್ರಾಮದವರು, ಅಬ್ದುಲ್ ಖಾದರ್ ಎಸ್.ಎ(58),ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ ಶಿಫಾನ ಮಂಜಿಲ್, ವಡಂಕುಂಕರ, ಕುನಿಯಾ, ಪೆರಿಯಾ, ಆಯೂಬ್ ಖಾನ್, ಪ್ರಾಯ(51),ದಕ್ಷಿಣ ಕನ್ನಡ, ಪುತ್ತೂರು, ಬಲ್ನಾಡು ರೂರಲ್, ಬೆಳಿಯೂರು ಕಟ್ಟೆ ನಿವಾಸಿಗಳು ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಶದಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾ ನೋಟುಗಳು, ಹಾಗೂ 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಗಳ ಪೈಕಿ ಪ್ರಿಯೇಶ್ ಎಂಬಾತನು ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ನ್ನು ಹೊಂದಿದ್ದು, ಈ ಪ್ರಿಂಟಿಂಗ್ ಪ್ರೆಸ್ ನಲ್ಲಿ ಈ ಖೋಟಾ ನೋಟುಗಳನ್ನು ತಯಾರಿಸುತ್ತಿದ್ದನು. ಈ ಖೋಟಾ ನೋಟುಗಳನ್ನು ತಯಾರಿಸಲು ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸಿಕೊಂಡು ಈ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವುದಾಗಿದೆ.
ಆರೋಪಿಗಳು ಈ ಖೋಟಾ ನೋಟುಗಳನ್ನು ಕೇರಳದಿಂದ ತಯಾರಿಸಿಕೊಂಡು ತಂದು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದರು. ಈ ಖೋಟಾ ನೋಟು ಚಲಾವಣೆ ಜಾಲದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆಸ್ವಾಧೀನಪಡಿಸಿಕೊಂಡ ಸೊತ್ತುಗಳಾದ 500 ರೂಪಾಯಿ ಮುಖಬೆಲೆಯ 427 ಖೋಟಾ ನೋಟುಗಳು. (ಅಂದಾಜು ಮೌಲ್ಯ-2,13,500/) ನಗದು ಹಣ-9,030ರೂ, ಮೊಬೈಲ್ ಪೋನ್ -2 ( 30,000)ಮೊಬೈಲ್ ಪೋನ್ -1 (1,000/-) ಮೊಬೈಲ್ ಪೋನ್ -1 (10,000/-) ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಸಿಸಿಬಿ ಪಿಎಸ್ಐ ಯವರಾದ ನರೇಂದ್ರ, ಸುದೀಪ್ , ಎಎಸ್ಐ ಮೋಹನ್ ಕೆ ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಭಾಗವಹಿಸಿದ್ದಾರೆ.