ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿರುವ ವಿಡಿಯೋ ತುಣುಕು ಕೂಡ ವೈರಲ್ ಆಗಿತ್ತು. ಇದೀಗ ಇದರ ಬೆನ್ನಲ್ಲೇ ಜೈಲಿನ ಏಳು ಅಧಿಕಾರಿಗಳನ್ನು ಗೃಹಸಚಿವ ಜಿ. ಪರಮೇಶ್ವರ್ ಅವರು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಈ ಪ್ರಕರಣದಲ್ಲಿ ಏಳು ಅಧಿಕಾರಿಗಳನ್ನು ನಾವು ಸಸ್ಪೆಂಡ್ ಮಾಡಿದ್ದೇವೆ. ನಾನು ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು. ಕೆಲವರನ್ನು ಸಸ್ಪೆಂಡ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲಧಿಕಾರಿಗಳನ್ನು ಟ್ರಾನ್ಸ್ ಫಾರ್ ಮಾಡ್ತೇನೆ. ಪದೇ ಪದೇ ಈ ರೀತಿ ಆಗಬಾರದು. ಎಲ್ಲಾ ಬಂಧಿಕಾನೆಗಳಲ್ಲಿ ಸಿಸಿಟಿವಿ ಹಾಕುತ್ತಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮೇಲಧಿಕಾರಿಗಳು ಈ ಪ್ರಕರಣದಲ್ಲಿ ನೇರವಾಗಿ ಭಾಗಿ ಆಗಿದ್ದರೆ ಅವರನ್ನು ತೆಗೆದು ಹಾಕುತ್ತೇವೆ. ವರದಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ದರ್ಶನ್‌ಗೆ ಚಿಕನ್ ಬಿರಿಯಾನಿ ನೀಡಿಲ್ಲ. ಜೈಲಿನ ನಿಯಮದಂತೆ ನಡೆಯಲಾಗುತ್ತಿದೆ. ಈಗ ನಡೆದ ಘಟನೆ ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಜೈಲಿನಲ್ಲಿ ಜಾಮರ್ ಹಾಕಿ ಹೈ ಪ್ರೀಕ್ವೆನ್ಸಿ ಇಡಲಾಗಿತ್ತಂತೆ. ಇದರಿಂದ ಪಕ್ಕದ ಏರಿಯಾಗಳಿಗೆ ತೊಂದರೆ ಆಗಿತ್ತು. ಹೀಗಾಗಿ, ಸದ್ಯ ಪ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ. ಫೋಟೋ ಯಾರು ತೆಗೆದರು? ಯಾರ ಮೊಬೈಲ್?ನಲ್ಲಿ ತೆಗದಿದ್ದಾರೆ ಅನ್ನೋದು ಮುಖ್ಯ ಆಗುತ್ತದೆ ಎಂದರು.