ಮಂಗಳೂರು: ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಮಹಿಳಾ ಲೆಕ್ಕಪರಿಶೋಧಕಿ 48 ಲಕ್ಷ ರೂ ಹಣಕಾಸು ವಂಚನೆಗೈದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಹಣಕಾಸು ವ್ಯವಹಾರಗಳನ್ನು ಲೆಕ್ಕಪರಿಶೋಧಕಿ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಮಾಲಕ ಮತ್ತು ಆಡಿಟರ್ ಕಂಪೆನಿಯ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿದಾಗ ಕಳೆದ ಮೂರು ವರ್ಷಗಳಿಂದ ದೊಡ್ಡ ಹಣಕಾಸು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. 2024ರ ಜ.11ರಿಂದ 2024ರ ಆ.20ರವರೆಗೆ, 48,83,405 ರೂ. ಹಣ ಕಂಪೆನಿಯ ಸೌತ್ ಇಂಡಿಯನ್ ಬ್ಯಾಂಕ್ ಖಾತೆಯಿಂದ ಅಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಪುಷ್ಪಲತಾ ಈ ಹಣವನ್ನು ತನ್ನ ಪರಿಚಿತ ರಿತೇಶ್ ಎಂಬಾತನ ಖಾತೆಗೆ ವರ್ಗಾಯಿಸಿದ್ದು, ಬಳಿಕ ತನ್ನ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ. ಪುಷ್ಪಲತಾ ಕಂಪನಿಯ ಜಿಎಸ್‌ಟಿ ಪಾವತಿಗೆ ಮೀಸಲಾಗಿದ್ದ 48,83,405 ರೂ. ಹಣವನ್ನು ತನ್ನ ಮತ್ತು ರಿತೇಶ್ ಖಾತೆಗೆ ವರ್ಗಾಯಿಸಿ, ವಿಶ್ವಾಸಘಾತುಕ ಮತ್ತು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.