ಬೆಳ್ತಂಗಡಿ ಸಮೀಪ ಬೆಳಾಲು ಗ್ರಾಮದ ನಿವಾಸಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಭಟ್ (83) ಅವರ ಕೊಲೆ ಪ್ರಕರಣದ ಆರೋಪಿಗಳನ್ನು ಆ. 27 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆ. 31ರ ವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಯಲಾಗಿದೆ.
ಬೆಳಾಲು ನಿವಾಸಿ ಬಾಲಕೃಷ್ಣ ಭಟ್ ಅವರನ್ನು ಆ. 20ರಂದು ಅವರ ಮನೆಯಲ್ಲಿ ಕೊಲೆ ಮಾಡಿರುವ ಆರೋಪದಲ್ಲಿ ಆ. 24ರಂದು ಧರ್ಮಸ್ಥಳ ಠಾಣೆ ಪೊಲೀಸರು ಕಾಸರಗೋಡು ಮುಳ್ಳೇರಿಯಾದ ರಾಘವೇಂದ್ರ ಕೆದಿಲಾಯ (54) ಮತ್ತು ಆತನ ಪುತ್ರ ಮುರಳಿಕೃಷ್ಣ(21)ನನ್ನು ಆ. 27ರಂದು ಬಂಧಿಸಿದ್ದರು. ನ್ಯಾಯಾಧೀಶರು ಆರೋಪಿಗಳನ್ನು ಆ. 31ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು.
ಅದರಂತೆ ಪೊಲೀಸರು ಸ್ಥಳ ಮಹಜರು ಮಾಡಿದ ಬಳಿಕ ಆರೋಪಿಗಳ ಕಾಸರಗೋಡಿನ ಕುಂಬ್ಡಾಜೆಯ ವಡಂಬಳೆಯ ಮನೆಗೆ ಕರೆತಂದು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಅದರಲ್ಲಿ ಕೊಲೆ ಕೃತ್ಯಕ್ಕೆ ಬಳಸಿದ್ದ ಬೈಕ್, ಬಟ್ಟೆ, ಕತ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳನ್ನು ಮಂಗಳೂರು ಸಬ್‌ಜೈಲ್‌ಗೆ ಕರೆದೊಯ್ಯಲಾಗಿದೆ.
ಇಬ್ಬರು ಆರೋಪಿಗಳ ಕುರಿತು ಕಾಸರಗೋಡಿನ ಮನೆಯ ಸುತ್ತಮುತ್ತ ಉತ್ತಮ ಅಭಿಪ್ರಾಯವಿರಲಿಲ್ಲ. ಕೊಲೆ ಮಾಡಿದ ಬಳಿಕವೂ ಯಾವುದೇ ಅನುಮಾನ ಬಾರದಂತೆ ಇದ್ದರು. ಪೊಲೀಸರ ತೀವ್ರ ಸ್ವರೂಪದ ಕಾರ್ಯಕ್ಷಮತೆಯಿಂದ ತಂದೆ, ಮಗ ಇಬ್ಬರೂ ಕಂಬಿ ಎಣಿಸುವಂತಾಗಿದ್ದಾರೆ. ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.