ಮಂಗಳೂರು : ಬೇರೊಬ್ಬನನ್ನು ಮದುವೆಯಾಗಲು ಸಿದ್ದಳಾಗಿದ್ದ ಪ್ರಿಯತಮೆಯನ್ನು ಹತ್ಯೆಗೈದಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಟಿ ತಾಂಡಾದ ಸಂದೀಪ್ ರಾಥೋಡ್ (23) ಎಂಬಾತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಆರೋಪಿ ಸಂದೀಪ್ ರಾಥೋಡ್ ಮತ್ತು ಮೃತ ಅಂಜನಾ ವಸಿಷ್ಠಾ ಫೇಸ್‌ಬುಕ್‌ನಲ್ಲಿ ಪರಿಚಿತರಾಗಿ ಪ್ರೀತಿಯಲ್ಲಿದ್ದರು.
ಇಬ್ಬರೂ ಪರಸ್ಪರ ಉದ್ಯೋಗ ಪಡೆದ ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆ ತಯಾರಿಗೆ ಮಂಗಳೂರಿನ ಕೋಚಿಂಗ್ ಸೆಂಟರ್‌ಗೆ ಪ್ರವೇಶ ಪಡೆದಿದ್ದನು. ಈ ವೇಳೆ ಅಂಜನಾ ವಸಿಷ್ಠಾ ಕೂಡಾ ಮಂಗಳೂರಿಗೆ ಬಂದಿದ್ದು, ತಾವಿಬ್ಬರೂ ಪತಿ-ಪತ್ನಿಯೆಂದು ಬಾಡಿಗೆ ಕೊಠಡಿ ಪಡೆದಿದ್ದರು. ಬಳಿಕ ಅಂಜನಾ ವಸಿಷ್ಠಾ ಊರಿಗೆ ಹೋಗಿದ್ದ ಸಂದರ್ಭ ಮನೆಯವರು ಆಕೆಗೆ ಬೇರೊಬ್ಬ ಹುಡುಗನೊಂದಿಗೆ ಮದುವೆ ನಿರ್ಧರಿಸಿದ್ದರು. ಆಕೆಯೂ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು.
ಇದನ್ನು ಸಂದೀಪ್‌ಗೆ ತಿಳಿಸಿ ತನ್ನನ್ನು ಮರೆತುಬಿಡುವಂತೆ ತಿಳಿಸಿದ್ದಳು. ಇದರಿಂದ ಸಿಟ್ಟುಗೊಂಡ ಆತ ಅಂಜನಾನನ್ನು ಪುಸಲಾಯಿಸಿ, ಮಂಗಳೂರಿಗೆ ಕರೆಸಿಕೊಂಡಿದ್ದಾನೆ. ಇಲ್ಲಿ ಆಕೆಯೊಂದಿಗೆ ಜಗಳ ತೆಗೆದು ಬೆಡ್ ಮೇಲೆ ದೂಡಿ ಹಾಕಿ ತಲೆಯನ್ನು ಕಬ್ಬಿಣದ ಮಂಚದ ಸರಳಿನ ಸಂದಿಗೆ ತುರುಕಿಸಿ, ಟಿ.ವಿ ಕೇಬಲ್‌ನಿಂದ ಕತ್ತಿನ ಸುತ್ತ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಮೃತದೇಹದ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಆಕೆಯ ಎಟಿಎಂ ಕಾರ್ಡ್ ಬಳಸಿ 15,000 ಹಣ ವಿಥ್‌ಡ್ರಾವಲ್ ಮಾಡಿದ್ದನು. ನ್ಯಾಯಾಲಯ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಿ, 100 ದಾಖಲೆಗಳನ್ನು ಗುರುತಿಸಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000 ರೂ ದಂಡ ವಿಧಿಸಿದೆ. ದಂಡ ತರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ವಿಧಿಸಿದೆ. ಸರಕಾರದ ಪರವಾಗಿ ನಿವೃತ್ತ ಸರಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ, ಜುಡಿತ್ ಕ್ರಾಸ್ತಾ ವಾದ ಮಂಡಿಸಿದ್ದಾರೆ.