ಮಣಿಪಾಲ : ಜಲ್ಲಿಕಲ್ಲು ಸಾಗಾಟಕ್ಕೆ ಸಂಬಂಧಿಸಿ ನಕಲಿ ಪರವಾನಿಗೆ ಸೃಷ್ಟಿಸಿದ ಕ್ರಷರ್ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಜುಲೈ 6ರಂದು ವಾಹನವೊಂದರಲ್ಲಿ ಜಿಪಿಎಸ್ ಷರತ್ತು ಉಲ್ಲಂಘನೆ ಮಾಡಿ ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದು ಈ ಬಗ್ಗೆ ವಾಹನ ಮಾಲಕ ಸುಂದರ ಎಂಬವರಲ್ಲಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ವಿಚಾರಿಸಿದಾಗ ಉಪ ಖನಿಜ ಸಾಗಾಣಿಕೆಯ ಪರವಾನಿಗೆಯನ್ನು ಪಡೆದು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದರು.
ಅದರಂತೆ ಮಣಿಪಾಲ ಪೊಲೀಸರು ಪರವಾನಿಗೆ ಮತ್ತು ಬಾರ್ ಕೋಡ್ ಗಳನ್ನು ಪರಿಶೀಲಿಸಿದಾಗ ಐಎಲ್ಎಂಎಸ್ ತಂತ್ರಾಂಶದಲ್ಲಿ ಉಪಖನಿಜ ಸಾಗಾಣಿಕಾ ಪರವಾನಿಗೆಗಳನ್ನು ನೀಡಿರುವುದು ಕಂಡುಬಂದಿಲ್ಲ. ಇವುಗಳನ್ನು ಕ್ರಷರ್ ಮಾಲಕಿ ಕೆ. ರಾಧಿಕಾ ಹಿರೇಬೆಟ್ಟು ನಕಲಿ ಮಾಡಿ ಉಪಯೋಗಿಸಿ ರುವುದಾಗಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಹಾಜಿರಾ ಸಜನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ರೀತಿಯ ನಕಲಿ ಪರವಾನಿಗೆ ಸೃಷ್ಟಿಸಿ ಕ್ರಷರ್ ಮಾಲೀಕರು, ಮರಳು ದಕ್ಕೆ, ಕೆಂಪು ಕಲ್ಲು ಸಹಿತ ಎಲ್ಲಾ ವಿಧದ ಖನಿಜ ಸಂಪತ್ತು ತೆಗೆಯುವವರು ಸರಕಾರಕ್ಕೆ ಪಾವತಿಸಬೇಕಾದ ರಾಯಧನ ವಂಚಿಸುತ್ತಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿದೆ.
ಟೆಂಪೋ ಚಾಲಕ ಸುಂದರ್ ಅವರಿಗೆ ಜಿಪಿಎಸ್ ಉಲ್ಲಂಘನೆ ನೋಟಿಸ್ ತಲುಪುತ್ತಿದ್ದಂತೆ ತನ್ನಲ್ಲಿರುವ ಪರವಾನಿಗೆಯನ್ನು ಪೊಲೀಸರಿಗೆ ತೋರಿಸಿದ್ದರು ಮತ್ತು ತಾನು ದಂಡ ಪಾವತಿಸಲ್ಲ ಎಂದು ಹೇಳಿದ್ದರು. ಇದರ ಮಾಹಿತಿ ತಿಳಿಯುತ್ತಿದ್ದಂತೆ ಕ್ರಷರ್ ಮಾಲೀಕ ಷರತ್ತು ಉಲ್ಲಂಘಿಸಿದ ದಂಡ ಮೊತ್ತ 10ಸಾವಿರ ರೂ. ಪಾವತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟೆಂಪೊ ಚಾಲಕ ಜುಲೈ 06 ರಂದು ಎರಡು ಟ್ರಿಪ್ ಶೀಟ್ ಪಡೆದು ಜಲ್ಲಿ ಕಲ್ಲು ಸಾಗಾಟ ಮಾಡಿದ್ದು, ಒಂದರಲ್ಲಿ ಮಾತ್ರ ಉಲ್ಲಂಘನೆ ಕೇಸ್ ಹೇಗೆ ಬಂತು ಎನ್ನುತ್ತಿದ್ದಾರೆ. ಇದರಲ್ಲಿ ಸರಕಾರಕ್ಕೆ ಕೋಟ್ಯಾಂತರ ರೂ. ವಂಚಿಸುವ ದೊಡ್ಡ ಸಂಚು ಇದೆ ಎಂದು ಕಟ್ಟಡ ಸಾಮಾಗ್ರಿ ಸಾಗಟ ಮಾಡುವ ವಾಹನ ಚಾಲಕರು ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಈ ಅವ್ಯವಹಾರವನ್ನು ಭೇಧಿಸಿ ಸರಕಾರಕ್ಕೆ ವಂಚಿಸುವ ಕೋಟ್ಯಾಂತರ ರಾಯಧನ ಖದೀಮರ ಪಾಲಾಗುವುದನ್ನು ತಪ್ಪಿಸಬೇಕಾಗಿದೆ.