ಮಂಗಳೂರು:ಹತ್ತು ದಿನಗಳ ಹಿಂದೆ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಕಿಯೂರು ಅಳಿವೆಬಾಗಿಲಿನಲ್ಲಿ ಸಮುದ್ರ ಪಾಲಾಗಿದ್ದ ಚೆಮ್ನಾಡ್ ನಿವಾಸಿಯ ಮೃತದೇಹ ತ್ರಿಶೂರು ಸಮೀಪದ ಅಝಿಕ್ಕೋಡ್ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಚೆಮ್ನಾಡ್ ಕಲ್ಲುವಳಪ್ಪುವಿನ ಮುಹಮ್ಮದ್ ರಿಯಾಝ್(37) ಮೃತಪಟ್ಟವರು. ಆ.31ರಂದು ಮುಂಜಾನೆ 5:30ರ ಸುಮಾರಿಗೆ ಘಟನೆ ನಡೆದಿತ್ತು. ಕಿಯೂರು ಅಳಿವೆಬಾಗಿಲಿನಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ರಿಯಾಝ್ ನಾಪತ್ತೆಯಾಗಿದ್ದರು. ಬೆಳಗ್ಗೆ 9 ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮೊಬೈಲ್‌ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಮಧ್ಯೆ ಕಿಯೂರು ಅಳಿವೆಬಾಗಿಲಿನಲ್ಲಿ ರಿಯಾಝ್ ನ ಸ್ಕೂಟರ್ ಹಾಗೂ ಗಾಳ ಹಾಕುವ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಕುಟುಂಬಸ್ಥರು ಮೇಲ್ಪರಂಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು, ಅಗ್ನಿ ಪೊಲೀಸ್, ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರರು ರಿಯಾಝ್ ಅವರಿಗಾಗಿ ಶೋಧ ನಡೆಸಿದ್ದರು. ಆದರೆ ಅವರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆಯವರನ್ನು ಕರೆಸಿ ಗಂಟೆಗಳ ಕಾಲ ಶೋಧ ನಡೆಸಿದರೂ ಪ್ರಯೋಜವಾಗಲಿಲ್ಲ. ಬಳಿಕ ಎರಡು ದಿನಗಳ ಕಾಲ ನೌಕಾ ಪಡೆ ಸಿಬ್ಬಂದಿ ಹುಡುಕಾಟ ನಡೆಸಿದರೂ ವಿಫಲಗೊಂಡಿತ್ತು. ಈ ನಡುವೆ ಸೋಮವಾರ ಮಧ್ಯಾಹ್ನ ತ್ರಿಶೂರು ಅಝಿಕ್ಕೋಡ್ ಕಡಲ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಪ್ಯಾಂಟ್ ಕಿಸೆಯಿಂದ ಲಭಿಸಿದ ಮೊಬೈಲ್ ನಲ್ಲಿದ್ದ ಸಿಮ್ ಹಾಗೂ ಧರಿಸಿದ್ದ ಜಾಕೆಟ್ ನಿಂದ ರಿಯಾಝ್ ನ ಮೃತದೇಹ ಎಂದು ಗುರುತಿಸಲಾಗಿ ಮೃತದೇಹವನ್ನು ಕೊಡಂಗಲ್ಲೂರು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚೆಮ್ನಾಡ್ ಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.