ಮಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಮಾನವ ಸರಪಳಿ ನಿರ್ಮಾಣವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಹೆಜಮಾಡಿ ಟೋಲ್ ಗೇಟ್‌ನಿಂದ ಸುಳ್ಯ ಸಂಪಾಜೆ ಗೇಟ್‍ವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಪಿಟಿ ಸರ್ಕ್ಯೂಟ್ ಹೌಸ್ ಜಂಕ್ಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 9.30ಕ್ಕೆ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಮಾನವ ಸರಪಳಿ ರಚಿಸಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿದರು. ಆ ಬಳಿಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸಂವಿಧಾನ ಪ್ರಸ್ತಾವನೆಯನ್ನು ಓದಿದರು. ಅದನ್ನು ಎಲ್ಲರೂ ಪುನರುಚ್ಚರಿಸಿದರು. ಬೆಳಗ್ಗೆ 10 ಗಂಟೆಗೆ ಮಾನವ ಸರಪಳಿಯಲ್ಲಿ ಎಲ್ಲರೂ ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗಿ ಸರಪಳಿಯನ್ನು ಕಳಚಿದರು. ಈ ವೇಳೆ ವಿವಿಧ ಕಲಾ ಪ್ರಕಾರಗಳಿಂದ ಪ್ರದರ್ಶನ ನಡೆಯಿತು. ಅಲ್ಲದೆ ಕದ್ರಿ ಉದ್ಯಾನವನದಲ್ಲಿ ಸಸಿ ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲೈಮುಹಿಲನ್ , ಸಂಸದ ಬ್ರಿಜೇಶ್ ಚೌಟ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.