ಉಡುಪಿ: ಇತ್ತೀಚೆಗೆ ತೆರೆಕಂಡ ಕಲ್ಜಿಗ ಸಿನೆಮಾದಲ್ಲಿ ಬರುವ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಮತ್ತು ಈ ದೃಶ್ಯದಿಂದ ದೈವರಾಧನೆ ಪದ್ಧತಿಗೆ ಚ್ಯುತಿಯಾಗಿದೆ ಎಂಬ ಆರೋಪವನ್ನು ತುಳುನಾಡ ದೈವರಾಧನೆ ಸಂರಕ್ಷಣೆ ವೇದಿಕೆ ಆರೋಪ ಮಾಡಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಗೌರವಾಧ್ಯಕ್ಷ ದಿಲ್‌ರಾಜ್ ಆಳ್ವ, ದೈವರಾಧನೆ ತುಳುವ ಮಣ್ಣಿನ ಅಸ್ಮಿತೆ ಮತ್ತು ದೈವಗಳು ನಮ್ಮ ಮೂಲ ನಂಬಿಕೆಯಾಗಿದೆ.
ಇತ್ತೀಚೆಗೆ ನಮ್ಮ ದೈವರಾಧನೆಗೆ ಮನರಂಜನೆ ಕ್ಷೇತ್ರದಿಂದ ಸಾಂಸ್ಕೃತಿಕ ಆಪತ್ತು ಎದುರಾಗಿದೆ. ಮೊದಲಿಗೆ ಕಾಂತಾರದಿಂದ ಆರಂಭಗೊಂಡಿದ್ದು, ನಾವು ಇದನ್ನು ಹೆಮ್ಮೆ ಪಟ್ಟುಕೊಂಡೆವು. ಅನಂತರ ಇದು ಬೆಂಗಳೂರು, ಮೈಸೂರಿನಲ್ಲಿ ದೈವಗಳ ಪ್ರತಿಷ್ಠಾಪನೆ, ನೇಮ ಎಂಬ ಘಟನೆಗಳು ನಡೆಯಲು ಆರಂಭಗೊಂಡಿತು. ಈ ಬಳಿಕ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ವೇದಿಕೆ ವತಿಯಿಂದ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕಲ್ಜಿಗ ಸಿನಿಮಾಗೆ ಸಂಬಂಧಿಸಿ ನಾವು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ತುಳು ಸಿನಿಮಾ ಎಲ್ಲರೂ ನೋಡಬೇಕು. ಯಶಸ್ವಿಯಾಗಬೇಕು. ಆದರೆ ದೈವರಾಧನೆ ದೃಶ್ಯವನ್ನು ತೆಗೆಯಬೇಕು ಎಂದರು.
ವೇದಿಕೆ ಸದಸ್ಯೆ ಸಹನಾ ಕುಂದರ್ ಸೂಡ ಮಾತನಾಡಿ, ಮನರಂಜನೆಗಾಗಿ ಕಟ್ಟುಕಟ್ಟಳೆಗಳನ್ನು ಮೀರಿ ದೈವರಾಧನೆ ಎಲ್ಲೆಂದರಲ್ಲಿ ಚಿತ್ರೀಕರಿಸುವುದು ಸರಿಯಾದ ಕ್ರಮವಲ್ಲ. ದೈವರಾಧನೆ ಸಾಂಸ್ಕೃತಿಕ ಜಗತ್ತಿಗೆ ಕಾಲಿಟ್ಟರೆ ನಂಬಿಕೆ ಬೆಲೆ ಇಲ್ಲದಂತಾಗುತ್ತದೆ. ಈಗ ಅಪರೂಪವಾಗಿರುವ ದೈವ ನಿಂದನೆಯ ಘಟನೆಗಳು ಮುಂದಿನ ದಿನಗಳಲ್ಲಿ ಸಮಾನ್ಯವಾಗಲಿದೆ. ಇದೇ ರೀತಿ ಇದ್ದರೆ ಕಾಂತಾರ ಸೀಕ್ವೆಲ್ ಸಿನೆಮಾವನ್ನು ನಾವು ವಿರೋಧಿಸುತ್ತೇವೆ. ಕಲ್ಜಿಗ ಸಿನೆಮಾದಲ್ಲಿ ಕತ್ತರಿ ಹಾಕಿ ಅನಂತರ ಚಿತ್ರ ಬಿಡುಗಡೆಗೊಳಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ ಎಂದರು. ವೇದಿಕೆ ಮಂಗಳೂರು ಜಿಲ್ಲಾಧ್ಯಕ್ಷ ಭರತ್‌ರಾಜ್, ಸದಸ್ಯರಾದ ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.