ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ಮತ್ತು ಮುಖ್ಯಾಧಿಕಾರಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಘಟನೆ ನಡೆದಿದೆ.
ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರೊಬ್ಬರಿಂದ ಬಿಲ್ ಪಾಸ್ ಮಾಡುವ ಸಲುವಾಗಿ ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ದೂರು ನೀಡಿದ ಗುತ್ತಿಗೆದಾರ 2022-23ನೇ ಸಾಲಿನ 5ನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್ ಕೋಡಿ ಸರಕಾರಿ ಕೆರೆ ಅಭಿವೃದ್ಧಿಪಡಿಸುವ ಕಾಮಗಾರಿ ಕಾಂಟ್ರಕ್ಟ್ ಕೆಲಸವನ್ನು ನಿರ್ವಹಿಸಿದ್ದರು.
ಈ ಕಾಮಗಾರಿಯ ರೂ 9,77,154 ಮೊತ್ತದ ಬಿಲ್ಲು ಮಂಜೂರಾತಿಯ ಬಗ್ಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ರವರಲ್ಲಿ ವಿಚಾರಿಸಿದಾಗ ಬಿಲ್ಲು ಪಾಸ್ ಮಾಡಲು ತನಗೆ ರೂ 37,000 ಲಂಚವನ್ನು ನೀಡುವಂತೆ ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಯವರಿಗೆ ರೂ 15,000 ಲಂಚವನ್ನು ನೀಡಬೇಕೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಜೂನಿಯರ್ ಇಂಜಿನಿಯರ್ ನಾಗರಾಜು ರವರು ಮುಂಚಿತವಾಗಿ ರೂ 7000 ಹಣವನ್ನು ಪಡೆದುಕೊಂಡಿದ್ದರು.
ಈ ನಡುವೆ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ರವರು ರೂ. 30,000 ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ರೂ 15,000 ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.