ಕುಂಬಳೆ: ರೈಲು ಹಳಿಯ ಮೇಲೆ ಕಲ್ಲುಗಳನ್ನು ಇಟ್ಟು ಜು. 17ರಂದು ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಅಘಾತಕಾರಿ ವಿಚಾರ ಬಹಿರಂಗಗೊಂಡಿದೆ. ಬಂದ್ಯೋಡು ಮುಟ್ಟಂನ ಸಮೀಪ ಕೃತ್ಯವೆಸಗಿದ ಸಮಯದಲ್ಲಿ ಆ ಮಾರ್ಗವಾಗಿ ಮಂಗಳೂರು ಚೆನ್ನೈ ಮೈಲ್ ಎಕ್ಸ್ ಪ್ರಸ್ ಸಾಗಬೇಕಿತ್ತು ಆದರೆ ಲೊಕೊ ಪೈಲಟ್ ಇದನ್ನು ಗಮನಿಸಿದ್ದು ಇದರಿಂದ ಮುಂದೊದಗಬಹುದಾದ ದುರಂತ ತಪ್ಪಿತ್ತು.ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಕೋಟಿಕುಳಂ, ಕಣ್ಣಾಪುರಂ, ಕಣ್ಣೂರು ಸೌತ್, ವಳಪಟ್ಟಣಂ, ಪಾಪಿನಶ್ಯೇರಿ ಮತ್ತಿತರ ಕಡೆ ಇಂತಹುದೇ ಕೃತ್ಯ ಈ ಹಿಂದೆ ಎಸಗಲಾಗಿತ್ತು. ಈ ಘಟನೆಯನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಮತ್ತು ಪೊಲೀಸ್ ವಿಭಾಗ ಗಂಭೀರವಾಗಿ ಪರಿಗಣಿಸಿದ್ದು, ಈ ಕೃತ್ಯದಲ್ಲಿ ಉಗ್ರಗಾಮಿಗಳ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.ಜು. 17ರಂದು ಮಂಗಳೂರು ಚೆನ್ನೈ ಮೈಲ್ ಎಕ್ಸ್ ಪ್ರಸ್ ಸಾಗಬೇಕಿದಾದ ಸಮಯದಲ್ಲಿ ರೈಲಿನ ಲೊಕೊ ಪೈಲಟ್ ರೈಲು ಹಳಿಯಲ್ಲಿ ಕಲ್ಲಿರಿಸಿದುದನ್ನು ನೋಡಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು ತತ್‌ಕ್ಷಣದ ಕಾರ್ಯಾಚರಣೆಯಲ್ಲಿ ಕಲ್ಲುಗಳನ್ನು ತೆರವುಗೊಳಿಸಿ ಸಂಭಾವ್ಯ ಅನಾಹುತ ತಪ್ಪಿಸಲಾಗಿತ್ತು.