ಪುತ್ತೂರು: ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪತ್ರವನ್ನೇ ಪಡೆಯದೆ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದ್ದು ಅಂತಹ ಅಂಗಡಿಗಳಿಗೆ ನಗರಸಭೆ ಬೀಗ ಜಡಿಯಲು ಮುಂದಾಗಿದೆ.
ಉದ್ದಿಮೆ ನಡೆಸುವ ಅಂಗಡಿ ಮಾಲಕರು ಅಧಿನಿಯಮದ ಪ್ರಕಾರ ಪರವಾನಿಗೆ ಪತ್ರ ಪಡೆದೆ ವ್ಯವಹಾರ ಮಾಡಬೇಕು.
ಉದ್ಯಮ ಪರವಾನಿಗೆ ಪತ್ರ ಇಲ್ಲದಿದ್ದರೆ ಅದನ್ನು ಅನಧಿಕೃತ ಎಂದೇ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕೃತ, ಅನಧಿಕೃತ ಅಂಗಡಿ ಪತ್ತೆ ಕಾರ್ಯ ನಡೆಸಲಾಗಿದೆ.
ಅನಧಿಕೃತ ಅಂಗಡಿ ಗುರುತು
ಪರವಾನಿಗೆ ಪಡೆದ ಕಟ್ಟಡದಲ್ಲಿ ವ್ಯವಹಾರ ಆರಂಭಿಸುವ ಮೊದಲ ಅಂಗಡಿ ಮಾಲಕ ನಗರಸಭೆಗೆ ಅರ್ಜಿ ಸಲ್ಲಿಸಿ (ಆನ್‌ಲೈನ್) ಉದ್ಯಮ ಪರವಾನಿಗೆ ಪಡೆಯಬೇಕು. ಪ್ರತೀ ವರ್ಷ ಪರವಾನಿಗೆ ಪತ್ರವನ್ನು ನವೀಕರಿಸಬೇಕು. ಆದರೆ ಪುತ್ತೂರು ನಗರದೊಳಗೆ 200ಕ್ಕೂ ಅಧಿಕ ಅಂಗಡಿಗಳು ಉದ್ಯಮ ಪರವಾನಿಗೆ ಪಡೆದು ಕೊಳ್ಳದೆ ವ್ಯಾಪಾರ ವ್ಯವಹಾರ ನಡೆಸುತ್ತಿದೆ. ಇದು ಕಾನೂನು ಬಾಹಿರವಾಗಿದ್ದು ಈ ಹಿನ್ನೆಲೆಯಲ್ಲಿ ಪೌರಾ ಯುಕ್ತರ ನೇತೃತ್ವದ ಅಧಿಕಾರಿಗಳ ತಂಡವು ಅಂತಹ ಅಂಗಡಿಗಳನ್ನು ಗುರುತು ಮಾಡಿದೆ.
ಬೀಗ ಜಡಿಯುವಿಕೆ
ಪ್ರತೀ ಹತ್ತು ವಾರ್ಡ್‌ಗಳಿಗೆ ಒಂದು ತಂಡದಂತೆ ಒಟ್ಟು ಮೂರು ತಂಡ ರಚಿಸಲಾಗಿದೆ. ಈ ತಂಡವು ವಾರ್ಡ್ ವಾರು ಸಮೀಕ್ಷೆ ನಡೆಸುತ್ತಿದ್ದು ಉದ್ಯಮ ಪರವಾನಿಗೆ ರಹಿತವಾಗಿ ವ್ಯವಹಾರ ನಡೆಸುವ ಅಂಗಡಿಗೆ ನೋಟಿಸ್ ನೀಡಿದೆ. ನೋಟಿಸ್ ಸ್ವೀಕರಿಸಿದ ಮೂರು ದಿನದೊಳಗೆ ಉದ್ಯಮ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಿ ಪರವಾನಿಗೆ ಪತ್ರ ಪಡೆಯಬೇಕು. ತಪ್ಪಿದಲ್ಲಿ ಎಚ್ಚರಿಕೆ ನೀಡಿದ ಮೂರು ದಿನದಲ್ಲಿ ಅಂಗಡಿಗೆ ಬೀಗ ಜಡಿಯಲು ನಗರಸಭೆ ನಿರ್ಧರಿಸಿದೆ.
ಗೂಡಂಗಡಿಗಿಲ್ಲ ಉದ್ಯಮ ಪತ್ರ
ಬೀದಿ ಬದಿ ವ್ಯಾಪಾರ ಹಾಗೂ ಗೂಡಂಗಡಿಗಳಿಗೆ ಉದ್ಯಮ ಪರವಾನಿಗೆ ಪತ್ರದ ಆವಶ್ಯಕತೆ ಇಲ್ಲ. ಪುತ್ತೂರು ನಗರದಲ್ಲಿ 75 ಗೂಡಂಗಡಿಗಳಿಗೆ ನಗರಸಭೆ ವತಿಯಿಂದ ಅನುಮತಿ ನೀಡಲಾಗಿದೆ. ಗೂಡಂಗಡಿ ತೆರೆಯುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ನಗರಸಭೆಯ ಅನುಮತಿ ಪಡೆದುಕೊಳ್ಳದೆ ಏಕಾಏಕಿ ಗೂಡಂಗಡಿ ತೆರೆದರೆ ಅದು ನಿಯಮಕ್ಕೆ ವಿರುದ್ಧ ಎಂದಾಗಿ ಅನಧಿಕೃತ ಅಂಗಡಿ ಸಾಲಿಗೆ ಸೇರುತ್ತದೆ.
1600 ಮಂದಿ ನವೀಕರಣಕ್ಕೆ ಬಾಕಿ
ಪುತ್ತೂರು ನಗರಸಭೆಯಲ್ಲಿ ಕಳೆದ ವರ್ಷ 2749 ಪರವಾನಿಗೆದಾರರ ಪೈಕಿ 154 ಮಂದಿ ನವೀಕರಣ ಮಾಡಿಲ್ಲ. ಈ ವರ್ಷ 2976 ಉದ್ಯಮ ಪರವಾನಿಗೆದಾರರಿದ್ದು 1600 ಮಂದಿ ನವೀಕರಣಕ್ಕೆ ಬಾಕಿ ಇದ್ದಾರೆ. 1424 ಮಂದಿ ಮಾತ್ರ ನವೀಕರಿಸಿದ್ದಾರೆ. ಎಪ್ರಿಲ್, ಮೇ ಒಳಗೆ ನವೀಕರಿಸದೆ ಇರುವ ಪರವಾನಿಗೆದಾರರು ಪ್ರತಿ ದಿನಕ್ಕೆ ಇಂತಿಷ್ಟು ದಂಡ ವಿಧಿಸಿ ನವೀಕರಿಸಬೇಕಿದೆ.
ನಗರದಲ್ಲಿ 150 ರಿಂದ 200 ರ ತನಕ ಅನಧಿಕೃತ ಅಂಗಡಿಗಳು ಇರುವುದನ್ನು ಗುರುತಿಸಲಾಗಿದೆ. ಆ ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ಉದ್ಯಮ ಪರವಾನಿಗೆ ಪತ್ರ ಪಡೆದುಕೊಳ್ಳದಿದ್ದರೆ ಅಂತಹ ಅಂಗಡಿಗಳಿಗೆ ನಗರಸಭೆಯ ವತಿಯಿಂದಲೇ ಬೀಗ ಜಡಿಯಲಾಗುವುದು. – ಮಧು ಎಸ್. ಮನೋಹರ್ ಪೌರಾಯುಕ್ತ, ನಗರಸಭೆ ಪುತ್ತೂರು