ಮಂಗಳೂರು: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುದು ಗ್ರಾಮದ ಹಸನಬ್ಬ ಎಂಬಾತನಿಗೆ ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಭಾಗ್ಯಮ್ಮ ದಂಡ ಪಾವತಿಸುವಂತೆ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಫರಂಗಿಪೇಟೆ ಶಾಖೆಯಿಂದ ಹಸನಬ್ಬ 2012ರಲ್ಲಿ ಅಡವು ಸಾಲ ಪಡೆದುಕೊಂಡಿದ್ದರು. ಆರೋಪಿ ಸರಿಯಾದ ಸಮಯಕ್ಕೆ ಮರುಪಾವತಿಸದೆ ಸಾಲವನ್ನು ಸುಸ್ತಿ ಮಾಡಿದ್ದರು. ಹಾಗಾಗಿ ಆರೋಪಿ ವಿರುದ್ಧ ಸಹಕಾರಿ ಕಾಯ್ದೆಯನ್ವಯ ಕಾನೂನು ಪ್ರಕ್ರಿಯೆ ಆರಂಭಿಸಿತ್ತು. 2019ರಲ್ಲಿ ಆಸ್ತಿಯನ್ನು ಹರಾಜಿಗಿಡುವ ಸಂದರ್ಭ ಆರೋಪಿಯು ಶಾಖೆಗೆ ಆಗಮಿಸಿ ಸಾಲದ ಭಾಗಶಃ ಬಾಕಿಗೆ ಚೆಕ್ ನೀಡಿದ್ದರು. ಇದು ಅಮಾನ್ಯಗೊಂಡ ಕಾರಣ ಎಸ್‌ಸಿಡಿಸಿಸಿ ಬ್ಯಾಂಕ್ ನ್ಯಾಯಾಲಯದ ಮೆಟ್ಟಿಲೇರಿತ್ತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಹಸನಬ್ಬ ಬ್ಯಾಂಕಿಗೆ 2.50 ಲಕ್ಷ ರೂ. ಪರಿಹಾರ ನೀಡಬೇಕು, 10,000 ರೂ. ದಂಡ ಪಾವತಿಸಬೇಕು. ತಪ್ಪಿದ್ದಲ್ಲಿ 1 ವರ್ಷದ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಪರ ವಕೀಲ ಸುಕೇಶ್ ಕುಮಾರ್ ಶೆಟ್ಟಿ ವಾದ ಮಂಡಿಸಿದ್ದರು.