ಮಂಗಳೂರು: ಮಂಗಳೂರು ಹೊರವಲಯದ ಮಳಲಿ ಪೇಟೆ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆ. 1ರಂದು ಆದೇಶ ನೀಡಲಿದೆ.
ಮಸೀದಿ ಕಟ್ಟಡದಲ್ಲಿ ದೇವಸ್ಥಾನ ಹೋಲುವ ರಚನೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಸಮೀಕ್ಷೆ ನಡೆಸುವಂತೆ ಹಿಂದೂ ಸಂಘಟನೆ ಪರ ವಕೀಲರು ಮನವಿ ಮಾಡಿದ್ದರು.
ಇದಕ್ಕೆ ಮಸೀದಿ ಪರ ವಕೀಲರು ಆಕ್ಷೇಪಿಸಿದ್ದರು. ವಕ್ಫ್ ಬೋರ್ಡ್ ಅಧೀನದಲ್ಲಿ ಇರುವುದರಿಂದ ಸರ್ವೇ ನಡೆಸಲು ಅವಕಾಶ ನೀಡದೆ ನವೀಕರಣ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ವಾದ ಮಂಡಿಸಿದ್ದರು.
ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸ್ಥಳೀಯರಾದ ಮನೋಜ್ ಕುಮಾರ್, ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದ್ದ ಆದೇಶದ ಪ್ರತಿಯನ್ನು ಮಸೀದಿ ಪರ ವಕೀಲರು ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆದೇಶದ ಪ್ರತಿ ಸ್ವೀಕರಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ತೀರ್ಪನ್ನು ಆ. 1ಕ್ಕೆ ನಿಗದಿಗೊಳಿಸಿದೆ.