ಮಂಗಳೂರು: ನಗರದ ಲೋಟಸ್ ಪ್ರಾಪರ್ಟೀಸ್ ಪಾಲುದಾರ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆತ್ನಿಸಿದ ಆರೋಪದಲ್ಲಿ ಬರ್ಕೆ ಠಾಣಾ ಪೊಲೀಸರು ಯುವಕರಿಬ್ಬರನ್ನು ಬಂಧಿಸಿದ್ದಾರೆ.
ಎನ್ಎಸ್‌ಯುಐ ಕಾರ್ಯಕರ್ತ ತನುಷ್ ಶೆಟ್ಟಿ ಹಾಗೂ ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧಿತ ಆರೋಪಿಗಳು. ಬಂಧಿತ ತನುಷ್ ಶೆಟ್ಟಿ ಈ ಬಾರಿ ಎಂಪಿ ಚುನಾವಣೆ ವೇಳೆ ನೋಟಾ ಕ್ಯಾಂಪೇನ್ ನಡೆಸಿದ್ದನು. ಜಿತೇಂದ್ರ ಕೊಟ್ಟಾರಿ ಬುಧವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣ ಕಡೆಯಿಂದ ಯುವಕರಿದ್ದ ಕಾರನ್ನು ಓವರ್ ಟೇಕ್ ತಮ್ಮ ಆಡಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಯುವಕರು, ಜಿತೇಂದ್ರ ಕೊಟ್ಟಾರಿಯವರು ತಮ್ಮ ಕೊಡಿಯಾಲಬೈಲ್‌ನ ಮನೆಗೆ ತಲುಪಿದಾಗ, ಅಲ್ಲಿ ಅವರನ್ನು ಅವಾಚ್ಯವಾಗಿ ನಿಂದಿಸಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಅಲ್ಲದೆ, ಕಾರನ್ನು ಕಾಂಪೌಂಡ್ ಒಳಗಡೆ ತಂದು ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪತ್ನಿಗೆ ಹಲ್ಲೆಮಾಡಲು ಯತ್ನಿಸಿದ್ದಾರೆ. ತಕ್ಷಣ ಜಿತೇಂದ್ರ ಕೊಟ್ಟಾರಿ ಬರ್ಕೆ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಸ್ಥಳದಿಂದಲೇ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.