ಮಂಗಳೂರು: ತಾನು ಬೋಧಿಸುತ್ತಿದ್ದ ಶಾಲೆಯ ವಿದ್ಯಾರ್ಥಿನಿಯರಿಗೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸಾಬೀತಾದ ಅಪರಾಧಿ ಶಿಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ಸೊ ವಿಶೇಷ ನ್ಯಾಯಾಲಯ) ತೀರ್ಪು ನೀಡಿದೆ. ಕಲ್ಲಮುಂಡ್ಕೂರು ನಿವಾಸಿ ಗುರುವ ಮೊಗೇರ (49) ಶಿಕ್ಷೆಗೊಳಗಾದ ಶಿಕ್ಷಕ. ಗುರುವ ಮೊಗೇರಾ ವಿದ್ಯಾರ್ಥಿನಿಯರನ್ನು ಶಾಲೆಯಲ್ಲಿರುವ ಪ್ರತ್ಯೇಕ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯರು ಶಾಲೆಯ ಮುಖ್ಯ ಶಿಕ್ಷಕರಲ್ಲಿ ದೂರು ನೀಡಿದ್ದರು. ಆದ್ದರಿಂದ ಅವರು ಗುರುವ ಮೊಗೇರನ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಹಿಳಾ ಠಾಣೆಯ ಉಪನಿರೀಕ್ಷಕಿ ಶಿವರುದ್ರಮ್ಮ ಎಸ್. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ. ವಿನಯ್ ಸಮಗ್ರ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ವಾದಿಸಿದ್ದರು.