ಮಂಗಳೂರು: ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ಆಶ್ರಯದಲ್ಲಿ ‘ಅಶೋಕ ಜನ-ಮನ 2024’ ವಸ್ತ್ರ ವಿತರಣಾ ಕಾರ್ಯಕ್ರಮ ನವೆಂಬರ್ 2 ನೇ ಶನಿವಾರ ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ದೀಪಾವಳಿಯ ಪ್ರಯುಕ್ತ ಪ್ರತಿ ವರ್ಷದಂತೆ ನಡೆಯುವ ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆಯನ್ನೊಳಗೊಂಡ ಕಾರ್ಯಕ್ರಮವು ಈ ಬಾರಿ ಅಶೋಕ ಜನ-ಮನ 2024 ಎಂಬ ಹೊಸ ಹೆಸರಿನೊಂದಿಗೆ ವಿನೂತನವಾಗಿ ವಿಜೃಂಭಣೆಯಿಂದ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರೈ ಎಸ್ಟೇಟ್‌ನ ಸ್ವಂತ ಖರ್ಚಿನಿಂದ 3.5 ಕೋಟಿ ವೆಚ್ಚದಲ್ಲಿ ವಸ್ತ್ರ ವಿತರಣೆ ನಡೆಯಲಿರುವುದು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಂಬೆಟ್ಟು ವರೆಗೆ ವಯಸ್ಕರಿಗೆ ಆಟೋ ರಿಕ್ಷಾ ಅಥವಾ ಬಗ್ಗಿ ವಾಹನ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಹಾಗೂ ಗೂಡುದೀಪ ಸ್ಪರ್ಧೆಗೆ ವಿಶೇಷ ಬಹುಮಾನ ನೀಡಲಾಗುವುದು. ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ರೈ ಎಸ್ಟೇಟ್ ಮಾಲಕರು, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.