ಬಂಟ್ವಾಳ : ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 1.25 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಕಳ್ಳತನ ಮಾಡಿದ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಕೇರಳ ಮೂಲದ ಕೊಲ್ಲಂ ಜಿಲ್ಲೆಯ ಆಲಪ್ಪಾಡ್‌ನ ಪ್ರಕಾಶ್ ಬಾಬು ಅಲಿಯಾಸ್ ಮೊಹಮ್ಮದ್ ನಿಯಾಜ್ (46), ಕಾಸರಗೋಡು ಜಿಲ್ಲೆಯ ಕೋಟಂಕರ ಮೂಲದ ಬಶೀರ್ ಕೆ ಪಿ ಅಲಿಯಾಸ್ ಆಕ್ರಿ ಬಶೀರ್ (44); ಮತ್ತು ಪುದು ಗ್ರಾಮದ ಎಫ್ ಜೆ ಮೊಹಮ್ಮದ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಆರೋಪಿಗಳು ನವೆಂಬರ್ 4 ರಂದು ದೇವಸ್ಥಾನದ ಮುಂಬಾಗಿಲು ಮುರಿದು ಆಭರಣಗಳ ಜೊತೆಗೆ ಕ್ಯಾಮೆರಾದ ಡಿವಿಆರ್ ಅನ್ನು ಕದ್ದೊಯ್ದಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಯತೀಶ್ ಎನ್ ನಿರ್ದೇಶನದಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ನಂದಕುಮಾರ್, ಹರೀಶ್, ಲೋಲಾಕ್ಷ, ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.