ತುಮಕೂರು: ತುಮಕೂರಿನ ಪ್ರಾದೇಶಿಕ ಸಾರಿಗೆ ಕಚೇರಿ ಮೇಲೆ ಅಕ್ರಮವಾಗಿ ನೊಂದಣಿ ಪ್ರಕ್ರಿಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬುಧವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಗುರುವಾರವೂ ತನಿಖೆಯನ್ನು ಮುಂದುವರೆಸಿದ್ದು, ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.ಈ ವೇಳೆ ಆರ್ ಟಿ ಓ ಕಚೇರಿಯಲ್ಲಿ ಅಕ್ರಮ ನೋಂದಣಿ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಸುಮಾರು 300 ಕೋಟಿ ರೂಪಾಯಿ ತೆರಿಗೆ ನಷ್ಟವಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಹೌದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿರುವ ಸುಮಾರು 6 ಸಾವಿರಕ್ಕೂ ಹೆಚ್ಚಿನ ಟ್ರ್ಯಾಕ್ಟರ್‌ಗಳಲ್ಲಿ 2,500 ಕೃಷಿ ದೃಢೀಕರಣ ಪತ್ರ (ಬೋನಾಫೈಡ್) ನೀಡಿ ಮಧ್ಯವರ್ತಿಯೊಬ್ಬ ಟ್ರ್ಯಾಕ್ಟರ್ ಗಳನ್ನು ನೋಂದಣಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಸಾರಿಗೆ ಅಧಿಕಾರಿಗಳು ಹಾಗೂ ಮಧ್ಯವರ್ತಿಯಿಂದ ನಡೆದಿರುವ ಈ ಅಕ್ರಮದಲ್ಲಿ ಸರ್ಕಾರಕ್ಕೆ 300 ಕೋಟಿಗೂ ಹೆಚ್ಚು ತೆರಿಗೆ ನಷ್ಟವಾಗಿದೆ ಎನ್ನಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಕಲಿ ಕೃಷಿ ದೃಢೀಕರಣ ಪತ್ರ ನೀಡಿ ನೋಂದಣಿ ಮಾಡಿಸಿರುವ ಕಡತಗಳ ಬೆನ್ನತ್ತಿದ್ದಾರೆ.
2,500 ಟ್ರ್ಯಾಕ್ಟರ್, 500ಕ್ಕೂ ಹೆಚ್ಚು ಜೆಸಿಬಿಗಳನ್ನು ನಕಲಿ ಕೃಷಿ ದೃಢೀಕರಣ ಪತ್ರವನ್ನು ನೀಡಿ ನೋಂದಣಿ ಮಾಡಲಾಗಿದ್ದು, ಅಕ್ರಮ ವ್ಯವಹಾರದಲ್ಲಿ ಸರ್ಕಾರಕ್ಕೆ 300 ಕೋಟಿಗೂ ಹೆಚ್ಚು ತೆರಿಗೆ ನಷ್ಟವಾಗಿದ್ದು, ನಕಲಿ ದಾಖಲೆಗಳನ್ನು ನೀಡಿ ನೋಂದಣಿ ಮಾಡಿರುವ ಟ್ರ್ಯಾಕ್ಟರ್ ಮತ್ತು ಜೆಸಿಬಿ ಕಡತಗಳು ಕಚೇರಿ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ಇಷ್ಟು ಅಕ್ರಮಗಳು ಕಂಡು ಬಂದರೆ ಬಗೆದಷ್ಟು ಇನ್ನಷ್ಟು ಅಕ್ರಮಗಳು ಪತ್ತೆಯಾಗುವ ಸಾಧ್ಯತೆ ಇದ್ದು, ನಕಲಿ ಕೃಷಿ ದೃಢೀಕರಣ ಪತ್ರ ನೀಡಿ ನೋಂದಣಿ ಮಾಡಿರುವ ಹಗರಣದಲ್ಲಿ ಹಿಂದಿನ ಅಧಿಕಾರಿಗಳು ನಿವೃತ್ತರಾಗಿರುವ ಸಿಬ್ಬಂದಿಗಳು ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಸಮಗ್ರವಾಗಿ ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.