ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಮೇಲ್ನೋಟಕ್ಕೆ 2-3 ಕಾರಣಗಳು ಕಂಡು ಬರುತ್ತಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ. ವಶಕ್ಕೆ ಪಡೆದವರಲ್ಲಿ ಅವರು ಯಾರು ಎಂಬುದನ್ನು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಸುಳ್ಯದ ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ನಿನ್ನೆಯಿಂದ ಮಾಹಿತಿ ಪಡೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಮಂಗಳೂರು ಕಮಿಷನರ್ ಸಹಾಯ ಕೂಡ ಪಡೆಯಲಾಗಿದೆ. ಉಡುಪಿ ಪೊಲೀಸರ ಸಹಾಯ ಕೂಡ ಪಡೆಯಲಾಗಿದೆ. ದಕ್ಷ ಅಧಿಕಾರಿಗಳ 6 ತಂಡ ನಾವು ರಚನೆ ಮಾಡಿದ್ದು ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಅಂತಿಮ ದರ್ಶನಕ್ಕೆ ಸಂಸದರು ಸಚಿವರುಗಳು ಸ್ಥಳಕ್ಕೆ ಬಂದಿದ್ದಾರೆ. ಜನರು ಭಾವಾವೇಶದಿಂದ ವಾಹನವನ್ನು ತಳ್ಳಲು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಲಘುಲಾಠಿ ಪ್ರಹಾರ ಮಾಡಬೇಕಾಯಿತು.
ಡಿ.ಸಿ ಸೆಕ್ಷನ್ 144 ಜಾರಿ ಮಾಡಿದ್ದಾರೆ ಪರಿಸ್ಥಿತಿ ಹತೋಟಿಯಲ್ಲಿದೆ. ಜನ ಯಾರು ಗುಂಪು ಕಟ್ಟಿ ಓಡಾಡಬಾರದು ಮತ್ತು ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಅವಕಾಶ ಕೊಡಬೇಕು ಎಂದು ಅಲೋಕ್ ಮೋಹನ್ ಹೇಳಿದ್ದಾರೆ. ಹತ್ಯೆಗೆ 2-3 ಕಾರಣಗಳು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ. ವಶಕ್ಕೆ ಪಡೆದವರಲ್ಲಿ ಅವರು ಎಂಬುದು ಸದ್ಯ ಹೇಳಲು ಸಾಧ್ಯವಿಲ್ಲ.
ವಿಚಾರಣೆ ಹಂತದಲ್ಲಿ ನಾನು ಇಷ್ಟು ಮಾತ್ರ ಹೇಳಬಲ್ಲೆ ಎಂದು ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.