ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈಯವರ ಬೇಡಿಕೆಗೆ ಅಸ್ತು ಎಂದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆಯ ವೇದಿಕೆಯಲ್ಲಿಯೇ ಪುತ್ತೂರಿಗೆ ಮಹಿಳಾ ಠಾಣೆಯನ್ನು ಮಂಜೂರು ಮಾಡಿ ಒಂದು ಕೋಟಿ ರೂ. ಮೊತ್ತ ಅನುದಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈಯವರು, ಗೃಹಸಚಿವರಲ್ಲಿ ಪುತ್ತೂರಿಗೊಂದು ಮಹಿಳಾ ಠಾಣೆಯ ಅಗತ್ಯವಿದೆ. ಈಗ ಇರುವ ಠಾಣೆಯನ್ನು ಬದಲಾವಣೆ ಮಾಡಬೇಕು. ಅದಕ್ಕಾಗಿ 9ಸೆಂಟ್ಸ್ ಜಾಗವನ್ನು ಗುರುತಿಸಿದ್ದೇವೆ. ಜೊತೆಗೆ ಎಸ್ಪಿ ಆಫೀಸನ್ನು ಪುತ್ತೂರಿಗೆ ವರ್ಗಾವಣೆ ಮಾಡಬೇಕು. ಅಧಿಕಾರಿಗಳಿಗೆ ಅದು ದೂರ ಆಗುವುದಿದ್ದಲ್ಲಿ ಕನಿಷ್ಠ ಪಕ್ಷ ಡಿಎಆರ್ ಅನ್ನಾದರೂ ನೀಡಬೇಕು. ಈಗಾಗಲೇ ಅದಕ್ಕೆ ನಾವು 2.10ಎಕ್ರೆ ಜಾಗವನ್ನು ಮೀಸಲಿಟ್ಟಿದ್ದೇವೆ. ಗುಪ್ತಚರ ಇಲಾಖೆಗೆ ದ.ಕ.ಜಿಲ್ಲೆಯಲ್ಲೊಂದು ಪ್ರತ್ಯೇಕ ಕಚೇರಿ ಮಾಡಬೇಕು ಎಂದು ಮೂರು ಬೇಡಿಕೆಗಳನ್ನು ಗೃಹಸಚಿವರ ಮುಂದಿಟ್ಟಿದ್ದರು. ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಮೊದಲನೇ ಬಾರಿಗೆ ಶಾಸಕರಾಗಿರುವ ಅಶೋಕ್ ರೈಯವರು ಬೇರೆಬೇರೆ ಕೆಲಸ ಮಾಡಬೇಕೆಂಬ ಉತ್ಸಾಹದಲ್ಲಿದ್ದಾರೆ. ನಾನೂ ಮೊದಲ ಬಾರಿ ಗೆದ್ದಾಗ ನಿಮಗಿಂತ ಉತ್ಸುಕನಾಗಿದ್ದೆ. ಆದರೆ ಮೊದಲ ಬಾರಿಗೇ ನನ್ನನ್ನು ಸಚಿವನನ್ನಾಗಿ ಮಾಡಿದ್ದರಿಂದ ಗಾಡಿ ಸ್ವಲ್ಪ ಸ್ಲೋ ಆಯ್ತು ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು. ಮುಂದುವರಿದು ಮಾತನಾಡಿದ ಗೃಹಸಚಿವರು, ಮಹಿಳಾ ಠಾಣೆಯನ್ನು ವೇದಿಕೆಯಲ್ಲಿಯೇ ಮಂಜೂರು ಮಾಡಿ. ಬಿಗ್ರೇಡ್ ಪೊಲೀಸ್ ಠಾಣೆ ಮಾಡಿ ಒಂದು ಕೋಟಿ ರೂ. ಅನುದಾನ ಘೋಷಿಸಿದರು. ಆದರೆ ಪೊಲೀಸ್ ಅಧಿಕಾರಿಗಳಿಗೆ ಅನಾನುಕೂಲ ಎಂಬ ದೃಷ್ಟಿಯಿಂದ ಎಸ್ಪಿ ಠಾಣೆಯನ್ನು ಮಂಜೂರು ಮಾಡುದಕ್ಕೆ ಹಿಂಜರಿದು, ಡಿಎಆರ್ ಬೇಕೇ ಅನ್ನೋದನ್ನು ಪರಿಶೀಲನೆ ನಡೆಸಿ. ಬೇಕೆಂದಿದ್ದಲ್ಲಿ ಮಂಜೂರು ಮಾಡುತ್ತೇನೆಂದು ಸಕಾರಾತ್ಮಕವಾಗಿ ಸ್ಪಂದಿಸಿದರು.