ಹೈದರಾಬಾದ್ : ತೆಲಂಗಾಣ ಪೊಲೀಸ್ ಇಲಾಖೆಯ ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ನಡುರಸ್ತೆಯಲ್ಲಿಯೇ ಆಕೆಯ ಸಹೋದರ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೈದರಾಬಾದ್‌ನ ಇಬ್ರಾಹಿಂಪುರದಲ್ಲಿ ನಡೆದಿದೆ.
ಇತ್ತೀಚೆಗೆ ಪ್ರೇಮ ವಿವಾಹವಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ವೇಳೆ ಈ ಹತ್ಯೆ ನಡೆದಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆ ಪ್ರಕರಣವೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಬಂದಿದ್ದ ಆರೋಪಿ ಹಿಂದಿನಿಂದ ಮಹಿಳೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಆಕೆ ಕೆಳಗೆ ಬಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದು ಮರ್ಯಾದಾ ಹತ್ಯೆಯ ಪ್ರಕರಣವೇ ಎಂಬುವುದರ ತನಿಖೆ ನಡೆಸುತ್ತಿದ್ದೇವೆ. ಮೃತ ಮಹಿಳೆ ಮತ್ತು ಸಹೋದರನ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ನಡೆದಿರುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.