ಉಳ್ಳಾಲ: ಎರಡು ಕಾರುಗಳ ನಡುವಿನ ಓವರ್ ಟೇಕ್ ರಭಸಕ್ಕೆ ವೃದ್ಧೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಡಂಕುದ್ರು ನಲ್ಲಿ ಸಂಭವಿಸಿದ್ದು, ಬಳಿಕ ಎರಡೂ ಕಾರುಗಳು ರಸ್ತೆ ಬದಿಯ ಕಮರಿಗೆ ಬಿದ್ದಿವೆ.
ಮೃತಪಟ್ಟ ಮಹಿಳೆ ಸೇವಂತಿಗುಡ್ಡೆಯ ನಿವಾಸಿ ಕೃಷ್ಣಪ್ಪ ಅವರ ಪತ್ನಿ ಬೇಬಿ (65) ಎಂದು ಗುರುತಿಸಲಾಗಿದೆ.
ಬೇಬಿ ಅವರು ಅಡಂ ಕುದ್ರುವಿನಲ್ಲಿ ಅಂಗಡಿ ಹೊಂದಿದ್ದು, ಪಂಪ್ವೆಲ್ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ ಅವರು ಕೆಲಸಕ್ಕೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ ಮಂಗಳೂರಿನ ಕಡೆಗೆ ವೇಗವಾಗಿ ಧಾವಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೇಬಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಬಿದ್ದಿದೆ. ಪೋಲೋ ಕಾರನ್ನು ಓವರ್ ಟೇಕ್ ಮಾಡುತ್ತಿದ್ದ ಕಿಯಾ ಕಾರು ಕೂಡ ರಸ್ತೆ ಬದಿಯ ಪೊದೆಗೆ ನುಗ್ಗಿದೆ. ಅಪಘಾತದಲ್ಲಿ ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ರವಿಶಂಕರ್, ಸಂಚಾರಿ ಎಸಿಪಿ ನಜ್ಮಾ ಫಾರೂಕಿ, ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.