ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಿವಾಸಿ ವಿದೇಶಿ ಉದ್ಯೋಗಿ ಅಪರಿಚಿತೆ ಲಕ್ಷ್ಮೀ ಎಂಬಾಕೆಯ ಮಾತು ನಂಬಿ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 42.42 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ನಿವಾಸಿ ಗಿಲ್ಬರ್ಟ್ ಡಿಸೋಜ(44) ಹಣವನ್ನು ಕಳೆದುಕೊಂಡವರು. ಗಿಲ್ಬರ್ಟ್ ಡಿಸೋಜ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇವರಿಗೆ 2024 ಮಾರ್ಚ್ 13ರಂದು ಲಕ್ಷ್ಮೀ ಎಂಬ ಅಪರಿಚಿತೆಯೊಬ್ಬಳು ಕರೆ ಮಾಡಿ ಆನ್ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದರು.
ಆಕೆ ಟೆಲಿಗ್ರಾಂ ಖಾತೆಯನ್ನು ತೆರೆಯುವಂತೆ ಸೂಚಿಸಿದಂತೆ ಇವರು ಟೆಲಿಗ್ರಾಂ ಖಾತೆ ತೆರೆದಿದ್ದಾರೆ. ಬಳಿಕ ಇನ್ನೊಂದು ಟೆಲಿಗ್ರಾಂ ಲಿಂಕ್ ನೀಡಿ ಈ ಟೆಲಿಗ್ರಾಂನಲ್ಲಿ ಪ್ರೋಡಕ್ಟ್ ಮಾಹಿತಿಯನ್ನು ಹಾಕಿ 10,000ರೂ. ಪಾವತಿಸುವಂತೆ ತಿಳಿಸಿದ್ದರು. ಅದರಂತೆ ಮಾ.13ರಂದು ಅಪರಿಚಿತ ವ್ಯಕ್ತಿ ತಿಳಿಸಿದ ಖಾತೆಗೆ 10,000 ರೂ. ವರ್ಗಾಯಿಸಿದ್ದಾರೆ. ಈ ಹಣ ಅವರಿಗೆ ಮರುಪಾವತಿ ಆಗಿರುತ್ತದೆ.
ಬಳಿಕ ಟ್ರೇಡಿಂಗ್ ಮಾಡಲು ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ್ದಕ್ಕೆ ಮಾ.15ರಿಂದ ಆಗಸ್ಟ್ 15ರವರೆಗೆ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 42,42,764ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಆನ್ಲೈನ್ನಲ್ಲಿ ಟ್ರೇಡಿಂಗ್ ಮಾಡಲು ಮಾಡಲು ಹೋಗಿ 42,42,764ರೂ. ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.