ಉಡುಪಿ: ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಚಂದ್ರಶೇಖರ(34)ನಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಹಿಂದೆ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಪರಿಚಯಿಸಿಕೊಂಡ ಆರೋಪಿ ಬಾಲಕಿ ಜತೆ ಮೊಬೈಲ್ ಸಂಪರ್ಕ ಇರಿಸಿಕೊಂಡಿದ್ದ. ಆಕೆಗೆ ಕರೆ ಮಾಡಿ ಜನವಸತಿ ಇಲ್ಲದ ಮನೆಗೆ ಮತ್ತು ಹಾಡಿಗೆ ಬರುವಂತೆ ಬೆದರಿಕೆ ಒಡ್ಡಿ ಕರೆಸಿಕೊಳ್ಳುತಿದ್ದ. ಬಾಲಕಿಯನ್ನು ಕಾಡಿಗೆ ಬರಹೇಳಿದ್ದ ಆತ ಆಕೆಯ ಜತೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿದ್ದ. ತದನಂತರದಲ್ಲಿ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು.
ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದರು. ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 4 ಮಂದಿ ವಿರುದ್ಧ ಅಂದು ದೋಷಾರೋಪಣೆ ಸಲ್ಲಿಕೆಯಾಗಿತ್ತು. ಆಗಿನ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ ಟಿ.ಡಿ. ತನಿಖೆ ನಡೆಸಿದ್ದರು. ಕಾರ್ಕಳ ಇನ್ಸ್‌ಪೆಕ್ಟರ್ ನಾಗೇಶ್ ಕೆ. ಅವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಒಟ್ಟು 45 ಸಾಕ್ಷಿಗಳ ಪೈಕಿ 26 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. 1ನೇ ಆರೋಪಿ ಚಂದ್ರಶೇಖರ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಆತನಿಗೆ ಜೈಲು ಶಿಕ್ಷೆ, 21 ಸಾವಿರ ರೂ.ದಂಡ, ಸರಕಾರಕ್ಕೆ 6 ಸಾವಿರ ರೂ. ಸಂತ್ರಸ್ತೆಗೆ 15 ಸಾವಿರ ರೂ. ಹಾಗೂ ಸರಕಾರದಿಂದ ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.