ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ಹೂಡಿಕೆ ಮಾಡಿಸಲು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಇಬ್ಬರು ಆರೋಪಿಗಳನ್ನು ಮಂಗಳೂರು ಸೆನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ರಾಜ್ಯದ ಗಂಜಂ ಜಿಲ್ಲೆಯ ನೌಗಾನ ತಾಲೂಕಿನ ರಂಪ ಗ್ರಾಮದ ನಿವಾಸಿ ಕಣಾತಲ ವಾಸುದೇವ ರೆಡ್ಡಿ (25) ಮತ್ತು ಕೇರಳ ರಾಜ್ಯದ ಕೋಝಿಕೋಡ್‌ನ ತಾಮರಚೇರಿ ರಾರೋತ್, ಪರಪ್ಪನ್ ಪೊಯಿಲ್ ನಿವಾಸಿ ಜಯಂತ್ ಪಿ (35) ಬಂಧಿತ ಆರೋಪಿಗಳು. ಕಣಾತಲ ವಾಸುದೇವ ರೆಡ್ಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಬರುವ ಆಮಿಷವೊಡ್ಡಿ ‘ಸ್ಟೋಕ್ ಫ್ರಂಟ್ ಲೈನ್’ ಎಂಬ ಲಿಂಕ್ ಕಳುಹಿಸಿ ವ್ಯಕ್ತಿಯೊಬ್ಬರಿಂದ ಹಂತಹಂತವಾಗಿ ಒಟ್ಟು 10,84,017 ರೂಪಾಯಿ ಪಡೆದು ವಂಚನೆ ಮಾಡಿದ್ದ ಎಂದು ದೂರು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಸ್ತಗಿರಿಯಾಗಿದ್ದ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಎಂಬಾತನ ಹೇಳಿಕೆಯ ಆಧಾರದಲ್ಲಿ ಭಾರತದಿಂದ 500ಕ್ಕೂ ಅಧಿಕ ಕಂಪೆನಿಗಳ ಸಿಮ್‌ಗಳನ್ನು ದುಬೈನಲ್ಲಿ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ, ಕಣಾತಲ ವಾಸುದೇವ ರೆಡ್ಡಿಯ ವಿರುದ್ದ LOC ಹೊರಡಿಸಲಾಗಿತ್ತು. ಅದರಂತೆ ಡಿ.18ರಂದು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈ ತೆರಳುತ್ತಿದ್ದಾಗ ಇಮ್ರಿಗೇಶನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಸೆನ್ ಠಾಣಾ ಪೊಲೀಸರು ಆತನನ್ನು ದೆಹಲಿಗೆ ತೆರಳಿ ದಸ್ತಗಿರಿ ಮಾಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಲು ವ್ಯಕ್ತಿಯೊಬ್ಬರಿಗೆ ಅಪರಿಚಿತನೊಬ್ಬ ಪುಸಲಾಯಿಸಿದ್ದಾನೆ. ಅಪರಿಚಿತ IIFL SECURITIES ಎಂಬ STOCK GROUP ಲಿಂಕ್ ಅನ್ನು ಕಳುಹಿಸಿ ದೂರುದಾರರಿಂದ ಹಂತಹಂತವಾಗಿ ಒಟ್ಟು 40,64,609ರೂ ಹಣ ಪಡೆದು ವಂಚಿಸಿದ್ದಾನೆ ಎಂದು ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸೆನ್ ಠಾಣಾ ಪೊಲೀಸರು ಜಯಂತ್ ಪಿ ಎಂಬಾತನನ್ನು ಬಂಧಿಸಿದ್ದಾರೆ. ಈತ ತನ್ನ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಕ್ಕೆ ಬಳಸಿದ್ದಾನೆ. ಬ್ಯಾಂಕ್ ಖಾತೆಯ ಮೇಲೆ ದೇಶದ್ಯಾಂತ ಸುಮಾರು 90ಕ್ಕೂ ಅಧಿಕ ದೂರು ಇರುವುದು ತನಿಖೆಯ ವೇಳೆ ಕಂಡುಬಂದಿರುತ್ತದೆ. ಸದ್ರಿ ಆರೋಪಿತನನ್ನು ಕೇರಳಕ್ಕೆ ತೆರಳಿ ವಶಕ್ಕೆ ಪಡೆದುಕೊಂಡು ಬರಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.