ಮಂಗಳೂರು: ಅಧಿಕ ಲಾಭಾಂಶದ ಆಮಿಷವೊಡ್ಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ 10.84ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮಂಗಳೂರು ಸೆನ್ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕೇರಳ ರಾಜ್ಯದ, ಪಾಲಕ್ಕಾಡ್‌ನ ಮಲಪ್ಪುರಂ ಪುಲಪಟ್ಟ ಪರಕ್ಕಾಡ್‌ನ ಜಾಫರ್ ಕೆ(49) ಬಂಧಿತ ಆರೋಪಿ. ಅಪಚಿರಿತ ವ್ಯಕ್ತಿಯೊಬ್ಬನು ಪಿರ್ಯಾದಿದಾರರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿದ್ದಾರೆ. ಅದರಂತೆ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ ಸ್ಟೋಕ್ ಫ್ರಂಟ್ ಲೈನ್ ಎಂಬ ಲಿಂಕ್ ಅನ್ನು ವಾಟ್ಸ್ಆ್ಯಪ್‌ಗೆ ಕಳುಹಿಸಿದ್ದಾರೆ. ಅದರಂತೆ ಪಿರ್ಯಾದಿದಾರರಿಂದ ಹಂತ ಹಂತವಾಗಿ 10,84,017ರೂ. ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆಯಲ್ಲಿ ಪಿರ್ಯಾದಿದಾರರಿಂದ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಈತ ಕೇರಳ ಮೂಲದ ಜಾಫರ್ ಎಂದು ತಿಳಿದು ಬಂದಿದೆ. ಕೇರಳ ರಾಜ್ಯಕ್ಕೆ ತೆರಳಿದ ಮಂಗಳೂರು ಸೆನ್ ಪೊಲೀಸರು ಆರೋಪಿತನನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರೆದಿರುತ್ತದೆ.