ಮಂಗಳೂರು: ಡಿಜಿಟಲ್ ಅರೆಸ್ಟ್ ಮಾಡಿಸುವುದಾಗಿ ಮಂಗಳೂರಿನ ವ್ಯಕ್ತಿಯೊಬ್ಬರನ್ನು ನಂಬಿಸಿ 1.71ಕೋಟಿ ರೂ. ವಂಚನೆ ಮಾಡಿರುವ ಕೇರಳ ಮೂಲದ ಯುವಕನನ್ನು ಮಂಗಳೂರು ಸೆನ್ ಠಾಣಾ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯ ಮಾವೂರ್, ಪಳ್ಳಿಯೊಲ್, ಚಿರಕ್ಕಲ್ ತಝಾಮ್, ಚೊಕ್ಕತ್‌ನ ಆಕಾಶ್ ಎ.(22) ಬಂಧಿತ ಆರೋಪಿ. ಪಿರ್ಯಾದಿದಾರರಿಗೆ ಅಪರಿಚಿತ ವ್ಯಕ್ತಿ TRAIನಿಂದ ಕರೆ ಮಾಡುವುದಾಗಿ ತಿಳಿಸಿ ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬ್ರ ರಿಜಿಸ್ಟರ್ ಆಗಿದೆ. ಮಾರ್ಕೆಟಿಂಗ್ ನೆಪದಲ್ಲಿ ತಮಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಕಿರುಕುಳ ಕೊಡುತ್ತಿರುವುದರ ಬಗ್ಗೆ FIR ದಾಖಲಾಗಿದೆ. ಆದ್ದರಿಂದ ತಕ್ಷಣ ಎಫ್ಐಆರ್ ದಾಖಲಾದ ಅಂಧೇರಿ(E) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ (9967014480)ಯ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುತ್ತದೆ.
ಅಲ್ಲದೆ ಅಂಧೇರಿಯ ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಇದಕ್ಕೆ Identity ಬಳಸಿ ಸಿಮ್ ಖರೀದಿಸಲಾಗಿದೆ. ಆದ್ದರಿಂದ ತಮ್ಮನ್ನು ಬಂಧಿಸಿ ಜೈಲಿಗಟ್ಟಲಾಗುತ್ತದೆ. ಡಿಜಿಟಲ್ ಆರೆಸ್ಟ್ ಮಾಡುವುದಾಗಿ ಅವರನ್ನು ನಂಬಿಸಲಾಗಿದೆ. ಇದರಿಂದ ಬೆದರಿದ ಪಿರ್ಯಾದಿದಾರರು ಅಪರಿಚಿತ ಹೇಳಿದಂತೆ ಹಂತ ಹಂತವಾಗಿ 1,71,00,000ರೂ. ಆತ ಹೇಳಿದ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಬಳಿಕ ತಾನು ವಂಚನೆಗೆ ಒಳಗಾಗಿರುವುದು ತಿಳಿದು ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ಕೇರಳ ಮೂಲದ ಆಕಾಶ್‌ನನ್ನು ಬಂಧಿಸಿದ್ದಾರೆ. ಅಲ್ಲದೆ ಆತ ಸೈಬರ್ ಅಪರಾಧಕ್ಕೆ ಬಳಸಿರುವ ಬ್ಯಾಂಕ್ ಖಾತೆಯನ್ನು ಸೀಝ್ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಇನ್ನುಳಿದ ಆರೋಪಿತರ ಪತ್ತೆಗೆ ತನಿಖೆ ಮುಂದುವರೆದಿರುತ್ತದೆ