ಮಂಗಳೂರು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ನಗರದ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾದ ವರದಿಯಾಗಿದೆ. ತಡರಾತ್ರಿಯಿಂದ ಮತ್ತೆ ಗುಡುಗು ಸಹಿತ ಮಳೆ ಸುರಿಯುತ್ತಿದೆ. ಪರಿಣಾಮ ಮಂಗಳೂರು ನಗರ ಸೇರಿದಂತೆ ಹಲವು ಪ್ರದೇಶಗಳು ಮಳೆರಾಣಾರ್ಭಟಕ್ಕೆ ತತ್ತರಿಸಿ ಹೋಗಿದೆ.
ನಿನ್ನೆ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಬಲ್ಲಾಲ್ ಬಾಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಾಂಡೇಶ್ವರ ಶಿವನಗರ ಭಾಗದಲ್ಲಿ ಮನೆಗಳು ಜಲಾವೃತಗೊಂಡಿವೆ. ಕರಂಗಲ್ಪಾಡಿ, ಮಂಗಳೂರು ರೈಲ್ವೆ ನಿಲ್ದಾಣ , ಪಂಪ್ ವೆಲ್ , ಅತ್ತಾವರ ಹೀಗೆ ಹಲವು ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ಗಳಿಗೆ ನೀರು ನುಗ್ಗಿದ್ದು, ರಸ್ತೆ ತುಂಬಾ ನೀರು ಆವರಿಸಿಕೊಂಡಿದೆ.
ಜು.3೦ರ ನಸುಕಿನ ಜಾವದಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಉಳ್ಳಾಲ, ಮೂಲ್ಕಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.