ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 2024ರಲ್ಲಿ ಒಟ್ಟು 134 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 40,46,75,693 ರೂಪಾಯಿ ವಂಚನೆ ನಡೆದಿದೆ. ಈ ಪ್ರಕರಣಗಳಲ್ಲಿ ಒಟ್ಟು 42 ಆರೋಪಿಗಳನ್ನು ಬಂಧಿಸಲಾಗಿದೆ. ಸೈಬರ್ ವಂಚನೆಯಲ್ಲಿ ಸೆನ್ ಠಾಣೆಯಲ್ಲಿ 62 ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ 72 ಪ್ರಕರಣಗಳು ದಾಖಲಾಗಿವೆ.
2023ರಲ್ಲಿ 9.83 ಕೋಟಿ ರೂ. ವಂಚನೆ ನಡೆದಿದ್ದು ಅದರಲ್ಲಿ 1.17 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿತ್ತು. 2024ರಲ್ಲಿ ಹೂಡಿಕೆ ಮಾಡುವ ಬಗ್ಗೆ ವಂಚನೆಗೈದಿರುವ 67 ಪ್ರಕರಣಗಳಲ್ಲಿ 30,36,61,299 ರೂ., ಫೆಡೆಕ್ಸ್, ಡಿಜಿಟಲ್ ಅರೆಸ್ಟ್, ಕೊರಿಯರ್ ಮತ್ತು ಕಸ್ಟಮ್ಸ್ ಹೆಸರಿನ 25 ಪ್ರಕರಣಗಳಲ್ಲಿ 7,07,99,645 ರೂ. ಹಣ ವಂಚಿಸಲಾಗಿದೆ. ಉದ್ಯೋಗದ ಆಮಿಷವೊಡ್ಡಿರುವ 8 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 1,21,64,788 ರೂ. ವಂಚಿಸಲಾಗಿದೆ. ವಿವಾಹ ಸಂಬಂಧಿ 4 ವಂಚನೆ ಪ್ರಕರಣಗಳಲ್ಲಿ 60,46,708 ರೂ. ವಂಚನೆ ನಡೆದಿದೆ.
ಒಎಲ್‌ಎಕ್ಸ್/ ಆನ್‌ಲೈನ್ ಶಾಪಿಂಗ್‌ಗೆ ಸಂಬಂಧಿಸಿದ 3 ಪ್ರಕರಣಗಳಲ್ಲಿ 5,93,626 ರೂ. ವಂಚಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಂಬಂಧಿಸಿ 5 ಪ್ರಕರಣಗಳಲ್ಲಿ 41,96,000 ರೂ. ವಂಚನೆ ಮಾಡಲಾಗಿದೆ. ಜಾಹೀರಾತಿಗೆ ಸಂಬಂಧಿಸಿ 4 ಪ್ರಕರಣಗಳಲ್ಲಿ 50,000 ರೂ., ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ನಡೆದ 3 ಪ್ರಕರಣಗಳಲ್ಲಿ 8,35,000 ರೂ. ಹಾಗೂ ಇತರ 15 ವಂಚನೆಗಳಲ್ಲಿ 63,28,622 ರೂ. ವಂಚಿಸಲಾಗಿದೆ.
ಸೈಬರ್ ಪ್ರಕರಣಗಳಿಗೆ ಸಂಬಂಧಿಸಿದಂತೆ 2024ರಲ್ಲಿ ಒಟ್ಟು 42 ಆರೋಪಿಗಳನ್ನು ಪೊಲೀಸ್ ಕಂಬಿ ಹಿಂದೆ ಕಳುಹಿಸಿದ್ದಾರೆ. ಇವರಲ್ಲಿ ಕರ್ನಾಟಕದ 15 ಮಂದಿ, ಒಡಿಸ್ಸಾ, ಮಹಾರಾಷ್ಟ್ರ, ರಾಜಸ್ತಾನ, ಹೊಸದಿಲ್ಲಿ ಮತ್ತು ಜಮ್ಮು ಕಾಶ್ಮೀರದ ತಲಾ ಒಬ್ಬರು, ಆಂಧ್ರಪ್ರದೇಶದ ಇಬ್ಬರು, ತಮಿಳುನಾಡಿನ 9 ಮಂದಿ, ಕೇರಳದ 11 ಮಂದಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.