ಮಂಗಳೂರು : ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಮಹಿಳೆಯೊಬ್ಬರು 8.75 ಲಕ್ಷ ರೂ. ಹಣ ಕಳಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಷೇರ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಯೂಟ್ಯೂಬ್‌ನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ SMCTK App ಅನ್ನು ಇನ್‌ಸ್ಟಾಲ್ ಮಾಡಿದ್ದರು. ಬಳಿಕ ತನ್ನ ಮೊಬೈಲ್ ವಿವರ ಮತ್ತು ಬ್ಯಾಂಕ್ ಖಾತೆ ನಮೂದಿಸಿದ್ದರು. ಬಳಿಕ ಮಹಿಳೆಯ ಮೊಬೈಲ್ ನಂಬರನ್ನು ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್, ಎಸ್ಎಂಸಿ ಮಾರ್ಕೆಟ್ ವಾಚ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಲಾಗಿತ್ತು. ಅದರಲ್ಲಿ ಗ್ರೂಪ್ ಅಡ್ಮಿನ್ ಆಗಿರುವ ಅಜಯ್ ಗಾರ್ಗ್ ಎಂಬಾತ ತನ್ನನ್ನು ಕಂಪನಿ ಸಿಇಒ ಎಂದು ಪರಿಚಯಿಸಿ ವಾಟ್ಸ್‌ಆ್ಯಪ್ ಕರೆ ಮಾಡಿದ್ದ. ಅಲ್ಲದೆ, ತಮ್ಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುವುದಾಗಿ ನಂಬಿಸಿದ್ದಾನೆ. ಬಳಿಕ ಖಾಸಗಿಯಾಗಿ ಚಾಟಿಂಗ್ ಮಾಡುತ್ತಾ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಇದರಂತೆ, ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿದ್ದ ಎಸ್‌ಎಂಸಿಟಿಕೆ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಿದ್ದು ಆತ ನೀಡಿರುವ ಬ್ಯಾಂಕ್ ಖಾತೆಗಳಿಗೆ ಹಣವನ್ನು ರವಾನಿಸಿದ್ದಾರೆ. ಎರಡು ಬ್ಯಾಂಕ್ ಖಾತೆಗಳಿಗೆ 8,75000 ರೂ. ಹಣವನ್ನು ಹಂತ ಹಂತವಾಗಿ ನೆಫ್ಟ್ ಮೂಲಕ ಹಾಕಿದ್ದರು. ಬಳಿಕ ಆ್ಯಪ್ ಗಮನಿಸಿದಾಗ ತನ್ನ ಹಣ ದುಪ್ಪಟ್ಟು ಆಗಿರುವುದು ಕಂಡುಬಂದಿತ್ತು.
ಅಲ್ಲದೆ, ಸ್ಪಷ್ಟವಾಗಿ 16,69,229 ರೂ. ಹಣ ಇರುವುದಾಗಿ ತೋರಿಸಿತ್ತು. ಈ ಹಣವನ್ನು ಹಿಂತಿರುಗಿ ಪಡೆಯಲು ಸಿಇಒ ಅಜಯ್ ಗಾರ್ಗ್ ಅವರನ್ನು ಮಹಿಳೆ ಸಂಪರ್ಕಿಸಿದ್ದಾರೆ. ಆದರೆ ಲಾಭದ ಹಣವನ್ನು ಪಡೆಯಲು 1,97,307 ರೂ. ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆ ಹಣವನ್ನು ಕಟ್ಟಿದರೆ ಮಾತ್ರ ಲಾಭದ ಹಣ ಸಿಗುತ್ತದೆ ಎಂದು ಆತ ಹೇಳಿದ್ದಾನೆ. ಇದರಿಂದ ತಾನು ಮೋಸ ಹೋಗಿರುವುದಾಗಿ ತಿಳಿದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.