ಮಂಗಳೂರು: ನಗರದ ವಾಮಂಜೂರಿನ ಪಿಲಿಕುಳ ಬಳಿಯ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಡ ಗ್ರಾಮದ ಜೋಡುಮಾರ್ಗ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಆಸೀಫ್(34), ಮೂಡ ಗ್ರಾಮದ ಜೋಡುಮಾರ್ಗ ಗೂಡಿನ ಬಳಿ ಮಸ್ಜಿದ್ ನಿವಾಸಿ ನಿಯಾಜ್ ಎನ್.ಎ.(40) ಬಂಧಿತ ಆರೋಪಿಗಳು. ಜನವರಿ 02ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಿಕುಳದ ಬಳಿ ಮೊಹಮ್ಮದ್ ಅಸಿಫ್ ಮತ್ತು ನಿಯಾಜ್ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 958 ಗ್ರಾಂ (20,000ರೂ.) ಗಾಂಜಾ ಹಾಗೂ ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.