ಮಂಗಳೂರು:ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯು ಜ10ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿತು. ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಮಾತನಾಡಿ, ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮತ್ತು ಕಚೇರಿ ಆವರಣದಲ್ಲಿ ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಷೇಧಿಸಲಾಗಿದೆ.
ದ.ಕ. ಜಿಲ್ಲೆಯ ಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳು ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು. ಶಾಲಾ ಕಾಲೇಜುಗಳ 100 ಮೀಟರ್ ಅಂತರದಲ್ಲಿ ಸಿಗರೇಟು ಸೇರಿದಂತೆ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆ ರದ್ದು ಮಾಡಲು ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚಿಸಿದರು.
ಇತ್ತೀಚೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿರುವ ವಿದ್ಯಮಾನ ಕಂಡು ಬರುತ್ತಿದೆ. ಈ ಬಗ್ಗೆ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ನಡವಳಿಕೆಗಳನ್ನು ಗಮನಿಸಬೇಕು ಎಂದು ಅವರು ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತಿಮ್ಮಯ್ಯ ಎಚ್.ಆರ್., ಎಸಿಪಿ ಗೀತಾ ಕುಲಕರ್ಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ಉಪಸ್ಥಿತರಿದ್ದರು