ಮಂಗಳೂರು: ವೈಯಕ್ತಿಕ ದ್ವೇಷದಿಂದ ಯುವಕನೋರ್ವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ. ತೆಂಕಕಜೆಕಾರು ನಿವಾಸಿ ಸಿದ್ದೀಕ್(34) ಶಿಕ್ಷೆಗೊಳಗಾದ ಅಪರಾಧಿ.ಮಹಮ್ಮದ್ ರಫೀಕ್(20) ಕೊಲೆಯಾದವನು. 2021ರ ಸೆ.12ರಂದು ಸಂಜೆ ರಫೀಕ್‌ನನ್ನು ಸಿಗರೇಟ್ ಸೇದುವ ನೆಪದಲ್ಲಿ ಸಿದ್ದೀಕ್ ಬಂಟ್ವಾಳದ ತೆಂಕಕಜೆಕಾರಿನ ಕೆಳಗಿನ ಕಾರ್ಲ ಎಂಬಲ್ಲಿನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ತನ್ನ ಮನೆಗೆ ಹೋಗಿ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿ, ಬಳಿಕ ಮೃತ ರಫೀಕ್‌ನ ಮನೆಗೆ ತೆರಳಿ ಆತನ ತಾಯಿಯಲ್ಲಿ ಕೇಳಿ ಆರೋಪಿ ಊಟ ಕೂಡ ಮಾಡಿದ್ದನು. ಆಗ ಪುತ್ರನ ಬಗ್ಗೆ ತಾಯಿ ಬಿಫಾತುಮ್ಮ ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದನು. ಬಳಿಕ ಸ್ನೇಹಿತ ಫಯಾಜುದ್ದೀನ್ ಎಂಬಾತನಲ್ಲಿ ಸುಳ್ಳು ಹೇಳಿ ಆತನ ಕಾರು ಪಡೆದು ಅದರಲ್ಲಿ ರಫೀಕ್ ಮೃತದೇಹವನ್ನು ದೇವಸ್ಯ ಮೂಡೂರಿನ ನೀರೊಲ್ಬೆಯ ಮೋರಿಯ ಕೆಳಗೆ ಬಿಸಾಡಿ ಮನೆಗೆ ಬಂದಿದ್ದನು. ಆದರೆ ಅಂದು ರಾತ್ರಿಯಿಡೀ ಪಾಪಪ್ರಜ್ಞೆಯಿಂದ ಬಳಲಿದ್ದ ಆರೋಪಿ ಸಿದ್ದೀಕ್ ಮರುದಿನ ಪುಂಜಾಲಕಟ್ಟೆ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿದ್ದಾಗಿ ಶರಣಾಗಿದ್ದನು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಶಿವಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ 19 ಸಾಕ್ಷಿಗಳನ್ನು ವಿಚಾರಿಸಿ 57 ದಾಖಲೆ, 14 ವಸ್ತುಗಳನ್ನು ಗುರುತಿಸಲಾಗಿದೆ. ವಾದ-ವಿವಾದ ಆಲಿಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಐಪಿಸಿ ಕಲಂ 302ರ ಪ್ರಕಾರ ಅಪರಾಧಿಗೆ ಜೀವಾವಧಿ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1ಲಕ್ಷ ರೂ. ದಂಡ ವಿಧಿಸಿದೆ. ಐಪಿಸಿ ಸೆಕ್ಷನ್ 201ರಂತೆ 7 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಮೃತನ ತಾಯಿಗೆ ಪರಿಹಾರ ನೀಡುವಂತೆಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕಿ ಜ್ಯೋತಿ ಪಿ.ನಾಯ್ಕ ಮತ್ತು ಬಿ.ಶೇಖರ ಶೆಟ್ಟಿ, ಉಳಿದ ಸಾಕ್ಷಿಗಳನ್ನು ಸರ್ಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ವಿಚಾರಿಸಿ ವಾದ ಮಂಡಿಸಿದ್ದರು.