ಮಂಗಳೂರು: ಯೂರೋಪ್‌ನ ಜಾರ್ಜಿಯಾ ದೇಶದ ಪ್ರವಾಸ ಪ್ಯಾಕೇಜ್ ಕುರಿತ ಮಾಹಿತಿಯನ್ನು ನಂಬಿ 1.51 ಲಕ್ಷ ರೂ. ಕಳೆದುಕೊಂಡಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆ ಜೆಸಿಂತಾಡಿ’ಸೋಜಾ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಫೋನ್ ಕರೆಯೊಂದು ಬಂದಿದ್ದು, ಅದರಲ್ಲಿ ನಿಮಗೆ ಗಿಫ್ಟ್ ವೋಚರ್ ಬಂದಿದ್ದು, ಮಂಗಳೂರಿನ ಹಂಪನಕಟ್ಟೆಯ ಹೊಟೇಲ್ ಒಂದರಿಂದ ಕಲೆಕ್ಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರೆ ಮತ್ತು ಅವರ ಗಂಡ ಡಿ. 14ರಂದು ಸಂಜೆ 5 ಗಂಟೆಗೆ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ಹರ್ಬಾನ್ ಮತ್ತು ಪ್ರಿಯಾಂಕಾ ಎನ್ನುವ ಹೆಸರಿನ ಇಬ್ಬರು ‘ಡ್ರಿಮಿ ಹೆವೆನ್ಸ್ ಕ್ಲಬ್ ಪೈ.ಲಿ. ಸಿಬಂದಿ’ ಎಂದು ಪರಿಚಯಿಸಿಕೊಂಡಿದ್ದಾರೆ. ರಜಾ ಸಮಯದಲ್ಲಿ ದೇಶ-ವಿದೇಶದಲ್ಲಿ ಪ್ರವಾಸ ಪ್ಯಾಕೇಜ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರು. ಈ ವೇಳೆ ಜೆಸಿಂತಾ ಅವರು ಜಾರ್ಜಿಯಾ ಪ್ರವಾಸ ಪ್ಯಾಕೇಜ್ ಇದೆಯೇ ಎಂದು ಕೇಳಿದಾಗ ಅದಕ್ಕೂ ವ್ಯವಸ್ಥೆ ಇದೆ ಎಂದು ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ದಂಪತಿ ಅವರು ನೀಡಿದ ಸಂಸ್ಥೆಯ ಬ್ಯಾಂಕ್ ಖಾತೆಯ ಸ್ಕಾ ನರ್‌ಗೆ ಒಟ್ಟು 1,51,800 ರೂ. ವಿವಿಧ ಮೂಲಗಳ ಮೂಲಕ ಜಮೆ ಮಾಡಿದ್ದಾರೆ. ಮೂರು ವಾರಗಳ ಬಳಿಕ ಅವರು ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಹಣವನ್ನು ವಾಪಸು ಕೇಳಲು ಆರಂಭಿಸಿದ ಬಳಿಕ ಕರೆಯನ್ನೂ ಸ್ವೀಕರಿಸಲಿಲ್ಲ. ವಿದೇಶಕ್ಕೆ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
