ಮಂಗಳೂರು: ರಸ್ತೆ ಅಪಘಾತದಲ್ಲಿ 21 ವರ್ಷದ ಯುವಕನ ಸಾವಿಗೆ ಕಾರಣನಾದ ಆರೋಪಿ ಬುಲೆಟ್ ಟ್ಯಾಂಕರ್ ಚಾಲಕನಿಗೆ 6 ತಿಂಗಳು ಜೈಲು ವಾಸ ಹಾಗೂ 7,500 ರೂಪಾಯಿ ದಂಡ ವಿಧಿಸಿ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಇ.ಎಸ್. ತೀರ್ಪು ನೀಡಿದ್ದಾರೆ. ತಮಿಳುನಾಡಿನ ಪುದುಕೊಟ್ಟಾಯಿಯ ಅಯ್ಯಪ್ಪನ್ ಡಿ( 32) ಶಿಕ್ಷೆಗೊಳಗಾದ ಅಪರಾಧಿ. 2020 ಫೆಬ್ರವರಿ 13ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ತಿಕ್ ಮಲ್ಯ ಎಂಬ ಯುವಕ ಬೈಕ್‌ನಲ್ಲಿ ಪದುವಾದಿಂದ ನಂತೂರು ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಬುಲ್ಲೆಟ್ ಟ್ಯಾಂಕರ್ ಅನ್ನು ಚಾಲಕ ಅಯ್ಯಪ್ಪನ್ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರ್ತಿಕ್ ಮಲ್ಯನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸಹಿತ ಕಾರ್ತಿಕ್ ಮಲ್ಯ ರಸ್ತೆಗೆ ಬಿದ್ದಿದ್ದು, ಬುಲ್ಲೆಟ್ ಟ್ಯಾಂಕರ್ ಮುಂಭಾಗದ ಎಡಬದಿಯ ಚಕ್ರ ಕಾರ್ತಿಕ್ ಮಲ್ಯನ ತಲೆ ಮತ್ತು ಎದೆಯ ಮೇಲೆ ಹರಿದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಸಂಪೂರ್ಣ ತನಿಖೆಯನ್ನು ನಡೆಸಿದ ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ರವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಇ.ಎಸ್.ರವರು ಆರೋಪಿಗೆ 6ತಿಂಗಳು ಜೈಲು ಶಿಕ್ಷೆ ಹಾಗೂ 7,500 ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿಯರಾದ ನೇತ್ರಾವತಿ ಹಾಗೂ ಗೀತಾ ರೈ.ರವರು ವಾದ ಮಂಡಿಸಿದ್ದಾರೆ.