ವಿಟ್ಲ: ಬೀಡಿ ಮಾಲಕನ ಮನೆಯಲ್ಲಿ ನಡೆದ ನಕಲಿ ಇಡಿ ದಾಳಿ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಸಚಿನ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಮುಂಬೈಯಿಂದ ಪೊಲೀಸರು ಕರೆತಂದಿದ್ದಾರೆ.
ಆದರೆ ಪೋಲೀಸ್ ವಶಕ್ಕೆ ಪಡೆದ ತಕ್ಷಣವೇ ಆರೋಪಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆರೋಪಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧಿತ ಆರೋಪಿ ಅಪಸ್ಮಾರ ಮತ್ತು ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗೆ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದಾರೆ.
ಜನವರಿ 3 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಎಂಬಾತನಿಗೆ ಮನೆಗೆ ನಕಲಿ ಇಡಿ ಅಧಿಕಾರಿಗಳ ಹೆಸರಲ್ಲಿ ದರೋಡೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡೀಸ್ ಎನ್ನುವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಮತ್ತೊಬ್ಬ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ.