ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಡೆತನದ ಜಮೀನಿನಲ್ಲಿ ಬಾಡಿಗೆಗಿದ್ದ ಕುಟುಂಬವೊಂದರ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಬಾಡಿಗೆದಾರರ ಪೈಕಿ ಓರ್ವರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಉಜಿರೆ ನಿವಾಸಿ ದಿ| ಜಯಶ್ರೀ ಹೊಳ್ಳ ಅವರ ಪುತ್ರ ವಿಜಯ ರಾಘವೇಂದ್ರ ದೂರು ನೀಡಿದವರು. ಇವರ ಅಜ್ಜ ವಿಷ್ಣಯ್ಯ ಹೊಳ್ಳ ಎಂಬವರಿಗೆ ದೇಗುಲದಿಂದ ಬಾಡಿಗೆಗೆ ನೀಡಿದ ಸ್ಥಳದಲ್ಲಿ ವಿಷ್ಣಯ್ಯ ಹೊಳ್ಳರ ನಿಧನದ ಬಳಿಕ ಪುತ್ರ ಗಣಪತಿ ವಿಷ್ಣು ಹೊಳ್ಳ, ಅವರ ಸಾವಿನ ಬಳಿಕ ಪತ್ನಿ ಶಾರದಮ್ಮನವರು ವಾಸಿಸುತ್ತಿದ್ದರು. ಈ ಮಧ್ಯೆ ಇಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಪುತ್ತೂರು ಪುರಸಭೆಯಿಂದ ಮನೆ ನಂಬರುಗಳನ್ನು ಪಡೆಯಲಾಗಿತ್ತು. 1998-99ರಲ್ಲಿ ಇದನ್ನು ಶಾರದಮ್ಮನವರಿಂದ ದೂರುದಾರರ ತಾಯಿ ಜಯಶ್ರೀ ಹೊಳ್ಳ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಜಯಶ್ರೀ ನಿಧನರಾಗಿದ್ದು, ಆ ಬಳಿಕ ದೂರುದಾರರು ದೇಗುಲಕ್ಕೆ ಸ್ಥಳ ಬಾಡಿಗೆ ನೀಡುತ್ತಿದ್ದಾರೆ. ಫೆ 3ರಂದು ಶಾಸಕ ಅಶೋಕ್ ರೈಯವರ ಚಿತಾವಣೆ ಮೇರೆಗೆ ಈಶ್ವರ್ ಭಟ್ ಅವರು ತನ್ನ ಸಹಚರರೊಂದಿಗೆ ಜೆಸಿಬಿ ಸಹಾಯದಿಂದ ಧ್ವಂಸ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದಕ. ಜಿಲ್ಲಾಧಿಕಾರಿ, ಪೊಲೀಸ್ ಉಪ ವಿಭಾಗಾಧಿಕಾರಿ, ಪೊಲೀಸ್ ನಿರೀಕ್ಷಕ, ನಗರ ಪೊಲೀಸ್ ಉಪನಿರೀಕ್ಷಕ, ನಗರ ಸಭೆ ಪೌರಾಯುಕ್ತ, ರಾಜ್ಯ ಮಾನವ ಹಕ್ಕುಗಳ ಆಯೋಗ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ದೂರಿನ ಪ್ರತಿಯನ್ನು ರವಾನಿಸಲಾಗಿದೆ.