ರಾಜ್ಯದಲ್ಲಿ ಸಾಲಗಾರರ ಮೇಲೆ ಮೈಕ್ರೋ ಫೈನಾನ್ಸ್ ಸಾಲ ನೀಡಿದವರ ಕಿರುಕುಳವನ್ನು ತಡೆಯಲು ರಾಜ್ಯ ಸರ್ಕಾರ ಹೊರಡಿಸಲು ಮುಂದಾಗಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕರಿಸಿದ್ದಾರೆ. ಮರುಪರಿಶೀಲನೆಗೆ ಸೂಚಿಸಿದ್ದಾರೆ.

ಇತ್ತೀಚೆಗೆ, ಮೈಕ್ರೋ ಫೈನಾನ್ಸ್ ಹಾವಳಿ, ಕಿರುಕುಳದಿಂದಾಗಿ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳಾಗಿವೆ. ಅಲ್ಲದೆ, ಹೆಚ್ಚಿನ ಮಂದಿ ಊರು ತೊರೆದು ಹೋಗುತ್ತಿದ್ದಾರೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರವು, ವಿಶೇಷ ಸಚಿವ ಸಂಪುಟ ಸಭೆ ಕರೆದು, ಹಲವಾರು ನಿಯಮಗಳೊಂದಿಗೆ ಸುಗ್ರೀವಾಜ್ಞೆ ಮಸೂದೆ ರಚಿಸಿತ್ತು. ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಕಳಿಸಿತ್ತು.
ಆದರೆ, ಇದೀಗ, ರಾಜ್ಯಪಾಲರು ಹಲವು ಕಾರಣಗಳನ್ನು ಉಲ್ಲೇಖಿಸಿ ಸುಗ್ರೀವಾಜ್ಞೆಯ ಮಸೂದೆಯನ್ನು ವಾಪಸ್ ಕಳಿಸಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ಸರ್ಕಾರ ಸಿದ್ದಪಡಿಸಿದ್ದ ಸುಗ್ರೀವಾಜ್ಞೆ ಮಸೂದೆಯಲ್ಲಿ ಸಾಲ ಕೊಟ್ಟವರ ಬಗ್ಗೆ ಯಾವುದೇ ಕಾಳಜಿಯನ್ನು ಉಲ್ಲೇಖಿಸಲಾಗಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ವರದಿಯಾಗಿದೆ.
10 ವರ್ಷಗಳ ಶಿಕ್ಷೆ ಮತ್ತು 5 ಲಕ್ಷ ದಂಡ ಅತಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಬಹುದಿತ್ತು ಎಂದು ರಾಜ್ಯಪಾಲರು ಉಲ್ಲೇಖಿಸಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
“ಈ ಸುಗ್ರೀವಾಜ್ಞೆಯು ಮೈಕ್ರೋ ಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಇದು ಬಡವರ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಆ ಮಸೂದೆಯನ್ನು ತಿರಸ್ಕರಿಸುವ ಮೂಲಕ ಸರ್ಕಾರದ ನಡೆಗೆ ರಾಜ್ಯಪಾಲರು ತಣ್ಣೀರು ಎರಚಿದ್ದಾರೆ.