ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಸೋಂಕು ದಿನೇ ದಿನೇ ಏರಿಕೆರಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.
ಸಾರ್ವಜನಿಕರು ಮಂಕಿಪಾಕ್ಸ್ ಸೋಂಕಿನಿಂದ ದೂರವಿರಲು ಕೈಗೊಳ್ಳಬೇಕಾದ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಮುಖವಾಗಿ ಸೋಂಕಿತರ ಜತೆಗೆ ಮಲಗುವುದು, ಊಟ ಮಾಡುವುದು, ಅವರ ಬಟ್ಟೆ, ಟವಲ್ ಬಳಸುವುದು ಇತ್ಯಾದಿ ಮಾಡಬಾರದು. ಸೋಂಕಿತರ ಬಟ್ಟೆಗಳನ್ನು, ಆರೋಗ್ಯವಂತ ವ್ಯಕ್ತಿಗಳ ಬಟ್ಟೆಗಳೊಂದಿಗೆ ಸೇರಿಸಿ ತೊಳೆಯಬಾರದು. ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸಾಮಾಜಿಕ ಸಭೆ, ಸಮಾರಂಭಗಳಿಂದ ದೂರ ಇರಬೇಕು ಎಂದು ಕೇಂದ್ರ ತಿಳಿಸಿದೆ.
ಇನ್ನು ಐಸೋಲೇಷನ್‌ನಲ್ಲಿರುವ ಸೋಂಕಿತ ವ್ಯಕ್ತಿಯನ್ನು ಯಾರೂ ಸಂಪರ್ಕಿಸಬಾರದು. ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಆಗಾಗ ಕೈಗಳನ್ನು ಶುಚಿಗೊಳಿಸಬೇಕು. =ಮೂಗು, ಬಾಯಿಯನ್ನು ಮಾಸ್ಕ್ ನಿಂದಲೂ, ಕೈಗಳನ್ನು ಹ್ಯಾಂಡ್ ಗ್ಲೌಸ್‌ಗಳಿಂದ ಕವರ್ ಮಾಡಿಕೊಳ್ಳಬೇಕು. ವಿಶೇಷವಬಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ, ಜನ ಇರುವಲ್ಲಿ ಈ ಮುನ್ನೆಚ್ಚರಿಕೆಗಳು ತೀರಾ ಅಗತ್ಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.