ಮಂಗಳೂರು: ಸೈಬರ್ ವಂಚಕರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದ್ದ ಪೊಲೀಸರು ಆರೋಪಿಗಳ ಜತೆಗೆ ಅವರ ದುಡ್ಡಿನಲ್ಲೇ ಪ್ರವಾಸ ಹೋಗಿದ್ದ ಆರೋಪದ ಬಗ್ಗೆ ಇದೀಗ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಸಿಪಿ ಸೆನ್ ರವೀಶ್ ನಾಯಕ್ ಅವರಿಗೆ ಪ್ರಾಥಮಿಕ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅವರು ತನಿಖೆ ಮಾಡಿ ಕೆಲ ದಾಖಲಾತಿ ಸಂಗ್ರಹ ಮಾಡಿದ್ದಾರೆ. ಫ್ಲೈಟ್ ಟಿಕೇಟ್ ಉರ್ವ ಠಾಣೆ ಇನ್ಸ್ ಪೆಕ್ಟರ್ ಹಣ ಕೊಟ್ಟು ಬುಕ್ ಮಾಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ತನಿಖೆ ಸಂದರ್ಭ ಹೆಡ್ ಪೊಲೀಸ್ ಕಾನ್ ಸ್ಟೇಬಲ್ ತಪ್ಪು ಮಾಡಿದ್ದಾರೆ. ಆರೋಪಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಈ ಬಗ್ಗೆ ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ಹೆಡ್ ಪೊಲೀಸ್ ಕಾನ್ ಸ್ಟೇಬಲ್ ಅಮಾನತು ಮಾಡಿದ್ದೇವೆ.ಠಾಣೆಯಲ್ಲಿ ತನಿಖೆ ಸಂದರ್ಭ ಕಾಲೇಜು ವಿದ್ಯಾರ್ಥಿಗಳ ತಂಡ ಬಂದಿದೆ. ಆ ವೇಳೆ ಇನ್ಸ್ ಪೆಕ್ಟರ್ ಸೈಬರ್ ಕ್ರೈಮ್ ಆರೋಪಿ ನಡೆಸಿದ ಕೃತ್ಯದ ಬಗ್ಗೆ ವಿದ್ಯಾರ್ಥಿಗಳ ಜೊತೆ ಹೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆ ನಿಯಮ ಪ್ರಕಾರ ಕ್ರಿಮಿನಲ್ಸ್ ಗಳನ್ನು ವಿದ್ಯಾರ್ಥಿಗಳ ಮುಂದೆ ಹಾಜರು ಮಾಡಬಾರದು. ಹೀಗಾಗಿ ಉರ್ವ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಿದ್ದೇವೆ ಎಂದು ಅವರು ತಿಳಿಸಿದರು.